ಹುಬ್ಬಳ್ಳಿ: ಸಾಲಬಾಧೆಯಿಂದ ಬೇಸತ್ತು ಉದ್ಯಮಿಯೋರ್ವ ತಮ್ಮ ಕಾರ್ಖಾನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋಕುಲ್ ರಸ್ತೆಯ ಇಂಡಸ್ಟ್ರಿಯಲ್ ಎಸ್ಟೇಟ್ನಲ್ಲಿ ನಡೆದಿದೆ. ರವಿ ಮುರಗೋಡ್ (45) ಆತ್ಮಹತ್ಯೆಗೆ ಶರಣಾದವರು.
ಶ್ರೀನಿಧಿ ಸ್ಟೀಲ್ ವರ್ಕ್ನ ಮಾಲೀಕರಾದ ಇವರು ಇಂದು ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದು, ಖಾಸಗಿ ಬ್ಯಾಂಕ್ ಹಾಗೂ ಇನ್ನಿತರ ಕಡೆಗಳಲ್ಲಿ ಉದ್ಯಮಿ ಸಾಲ ಮಾಡಿದ್ದರು ಎಂದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಉದ್ಯಮಿ ರವಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾ.ಪಂ.ಸದಸ್ಯನ ಶವ ಪತ್ತೆ: ಅನುಮಾನಾಸ್ಪದ ರೀತಿಯಲ್ಲಿ ಗ್ರಾ.ಪಂ ಸದಸ್ಯನ ಶವ ಮಂಡ್ಯದಲ್ಲಿ ಪತ್ತೆಯಾಗಿದೆ. ದೇವರಾಜೇಗೌಡ (65) ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಗಂಜಿಗೆರೆ ಗ್ರಾ.ಪಂ ಆವರಣದಲ್ಲಿ ಶವ ಪತ್ತೆಯಾಗಿದೆ.
ಗಂಜಿಗೆರೆ ಗ್ರಾ.ಪಂ.ಯಲ್ಲಿ ಶವ ಕಂಡುಬಂದಿದೆ. ಬೆಳಗ್ಗೆ ಎಂದಿನಂತೆ ಪಂಚಾಯತ್ ಸಿಬ್ಬಂದಿ ಬಂದಾಗ ವಿಷಯ ತಿಳಿದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಿಕ್ಷಾ ಚಾಲಕ ಆತ್ಮಹತ್ಯೆಗೆ ಶರಣು: ತೊಕ್ಕೊಟ್ಟು ರಿಕ್ಷಾ ಪಾರ್ಕ್ನಲ್ಲಿ ರಿಕ್ಷಾ ಚಾಲಕನಾಗಿದ್ದ ಕೆರೆಬೈಲು ಸೇವಂತಿಗುಡ್ಡೆ ನಿವಾಸಿ ಸಮೀರ್ (45) ಎಂಬವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ಕಾರಣ ತಿಳಿದುಬಂದಿಲ್ಲ. ವಿವಾಹಿತರಾಗಿರುವ ಸಮೀರ್ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ನಡೆಸಿರುವ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಟಾ ಏಸ್-ಕಾರಿನ ನಡುವೆ ಡಿಕ್ಕಿ-ಇಬ್ಬರು ಸ್ಥಳದಲ್ಲೇ ಸಾವು: ಟಾಟಾ ಏಸ್-ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ, ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮದ ಸಮೀಪ ನಡೆದಿದೆ. ಟಾಟಾ ಏಸ್ ವಾಹನದಲ್ಲಿ 10ಕ್ಕೂ ಹೆಚ್ಚು ಜನ ಇದ್ದು, ಸೀತಮ್ಮ ರಾಮಪ್ಪ (60 ), ಗಿರಿಯಮ್ಮ ರಾಠೋಡ (55) ಮೃತಪಟ್ಟಿದ್ದಾರೆ.
ಮೃತರು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮಾರಲದಿನ್ನಿ ಗ್ರಾಮದವರಾಗಿದ್ದಾರೆ. ಗುಳೇದಗುಡ್ಡದಲ್ಲಿ ಪೂಜೆಗಾಗಿ ಬರುತ್ತಿದ್ದ ಟಾಟಾ ಏಸ್ ಬಾಗಲಕೋಟೆಯಿಂದ ಕೊಪ್ಪಳಕ್ಕೆ ಹೊರಟಿದ್ದ ಕ್ರಿಟಾ ಕಾರು ನಡುವೆ ಡಿಕ್ಕಿ ಸಂಭವಿಸಿದೆ. ಗಾಯಾಳುಗಳನ್ನು ಹುನಗುಂದ ಹಾಗೂ ಬಾಗಲಕೋಟೆ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಗಿದೆ. ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಕಲಬುರಗಿ : ಗೃಹಿಣಿ ಅನುಮಾನಾಸ್ಪದ ಸಾವು.. ಪತಿ ವಿರುದ್ಧ ವಿಷ ಕುಡಿಸಿ ಕೊಲೆಗೈದ ಆರೋಪ