ಹುಬ್ಬಳ್ಳಿ: ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸುಗಮ ಸಾರಿಗೆ ವ್ಯವಸ್ಥೆಗಾಗಿ ಶಿಕ್ಷಣ ಇಲಾಖೆಯ ಕೋರಿಕೆಯಂತೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗುವ 2953 ಪರೀಕ್ಷಾರ್ಥಿಗಳಿಗಾಗಿ 106 ಬಸ್ಸುಗಳನ್ನು ನಿಯೋಜನೆ ಮಾಡಲಾಗಿರುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ತಿಳಿಸಿದ್ದಾರೆ.
ತಾಲ್ಲೂಕುವಾರು ವಿವರಗಳು: ತಾಲ್ಲೂಕು/ ಪರೀಕ್ಷಾ ಕೇಂದ್ರಗಳ ಸಂಖ್ಯೆ/ವಿದ್ಯಾರ್ಥಿಗಳ ಸಂಖ್ಯೆ/ನಿಯೋಜಿಸಿದ ಬಸ್ಸುಗಳ ಸಂಖ್ಯೆ ಹುಬ್ಬಳ್ಳಿ ಗ್ರಾಮೀಣ ಭಾಗದ 5 ಪರೀಕ್ಷಾ ಕೇಂದ್ರಗಳಿಗೆ 424 ವಿದ್ಯಾರ್ಥಿಗಳಿಗಾಗಿ 14 ಬಸ್ಗಳು, ಕಲಘಟಗಿ ತಾಲೂಕಿನ 7 ಕೇಂದ್ರಗಳಿಗೆ 894 ವಿದ್ಯಾರ್ಥಿಗಳನ್ನು ತಲುಪಿಸಲು 36 ಬಸ್ಗಳು, ಕುಂದಗೋಳ ತಾಲೂಕಿನ 6 ಪರೀಕ್ಷಾ ಕೇಂದ್ರಗಳಿಗೆ 585 ವಿದ್ಯಾರ್ಥಿಗಳನ್ನು ತಲುಪಿಸಲು 19 ಬಸ್ಗಳು ಹಾಗೂ ನವಲಗುಂದ ತಾಲೂಕಿನ 9 ಪರೀಕ್ಷಾ ಕೇಂದ್ರಗಳಿಗೆ 1050 ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು 37 ಬಸ್ಗಳನ್ನು ವ್ಯವಸ್ಥೆ ಮಾಡಿತ್ತು.
ಸಾರಿಗೆ ವ್ಯವಸ್ಥೆಯ ಕೊರತೆಯಿಂದಾಗಿ ಯಾವುದೇ ವಿದ್ಯಾರ್ಥಿ ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತನಾಗಬಾರದು ಎನ್ನುವ ನಿಟ್ಟಿನಲ್ಲಿ ಮುಂಚಿತವಾಗಿ ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು, ಘಟಕ ವ್ಯವಸ್ಥಾಪಕರುಗಳು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮತ್ತು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಲಾಯಿತು. ವಿವಿಧ ಊರುಗಳಿಂದ ಪರೀಕ್ಷಾ ಕೇಂದ್ರಗಳಿರುವ ಸ್ಥಳಗಳಿಗೆ ಮಾರ್ಗ ನಕ್ಷೆ ರೂಪಿಸಲಾಗಿತ್ತು. ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಅವಶ್ಯವಿರುವಷ್ಟು ಬಸ್ಸುಗಳನ್ನು ನಿಯೋಜನೆ ಮಾಡಲಾಗಿತ್ತು.
ಕೆಲವು ಬಸ್ಸುಗಳನ್ನು ಹಿಂದಿನ ದಿನ ರಾತ್ರಿಯೇ ಘಟಕಗಳಿಂದ ಹೊರಡಿಸಿ ತಾಲ್ಲೂಕು ಕೇಂದ್ರಗಳಲ್ಲಿ ನಿಲ್ಲಿಸಲಾಗಿತ್ತು. ಇನ್ನುಳಿದ ಬಸ್ಸುಗಳು ಬೆಳಗಿನ ಜಾವ ಘಟಕಗಳಿಂದ ಹೊರಟು ನಿಗದಿತ ಸಮಯದಲ್ಲಿ ವಿವಿಧ ಊರುಗಳಿಗೆ ತೆರಳಿ ಅಲ್ಲಿಂದ ಪರೀಕ್ಷಾರ್ಥಿಗಳನ್ನು ಹತ್ತಿಸಿಕೊಂಡು ನಿಗಧಿಪಡಿಸಿದ್ದ ಪರೀಕ್ಷಾ ಕೇಂದ್ರಗಳಿಗೆ ಸಕಾಲದಲ್ಲಿ ತಲುಪಿಸಲಾಯಿತು. ಎಲ್ಲಾ ಬಸ್ಸುಗಳನ್ನು ಪರೀಕ್ಷಾ ಕೇಂದ್ರದ ಹತ್ತಿರದಲ್ಲಿಯೆ ನಿಲ್ಲಿಸಲಾಗಿತ್ತು. ಪರೀಕ್ಷೆ ಬರೆದು ಹೊರಬಂದ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಮರಳಿ ಅವರವರ ಊರುಗಳಿಗೆ ಸುರಕ್ಷಿತವಾಗಿ ತಲುಪಿಸಲಾಗಿರುತ್ತದೆ.
ಎಲ್ಲಾ ಬಸ್ಸುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಸೋಡಿಯಂ ಹೈಪೋಕ್ಲೋರೈಟ್ ದ್ರಾವಣ ಸಿಂಪಡಿಸಿ ಸ್ಯಾನಿಟೇಷನ್ ಮಾಡಲಾಗಿರುತ್ತದೆ. ಪ್ರತಿಯೊಂದು ಬಸ್ಸಿಗೆ ಚಾಲಕರೊಂದಿಗೆ ನಿರ್ವಾಹಕರನ್ನು ನಿಯೋಜಿಸಿ ಮಾರ್ಗದರ್ಶಿ ನಿರ್ದೇಶನಗಳ ಪ್ರಕಾರ ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆ ಮತ್ತು ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮುಂತಾದ ಎಲ್ಲಾ ಸುರಕ್ಷತಾ ಕ್ರಮಗಳ ಪಾಲನೆ ಬಗ್ಗೆ ನಿಗಾ ವಹಿಸಲಾಗಿತ್ತು ಎಂದು ರಾಮನಗೌಡರ್ ವಿವರಿಸಿದ್ದಾರೆ.