ಹುಬ್ಬಳ್ಳಿ : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಪಕ್ಷ ತೊರೆದ ಮೇಲೆ ಆರೋಪ ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಬಗ್ಗೆ ಉಲ್ಲೇಖ ಮಾಡಿರುವ ಅವರಿಗೆ ನಮ್ಮ ಪಕ್ಷದಲ್ಲಿ ಯಾವುದೇ ನಿರ್ಧಾರವನ್ನು ಯಾರೋ ಒಬ್ಬರು ತೀರ್ಮಾನ ಮಾಡಲ್ಲ ಎಂಬ ಬಗ್ಗೆ ನಮಗಿಂತ ಚೆನ್ನಾಗಿ ಅವರಿಗೇ ಗೊತ್ತಿದೆ. ಪಕ್ಷದ ಮೇಲಿನ ಸಹಜವಾದ ವಿರೋಧವನ್ನು ಈ ರೀತಿ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಸಾಮೂಹಿಕ ನಿರ್ಣಯ ಕೈಗೊಳ್ಳುತ್ತೇವೆ ಎಂದು ಜಗದೀಶ್ ಶೆಟ್ಟರ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಲು ಬಿ.ಎಲ್ ಸಂತೋಷ್ ಕಾರಣ ಎಂದು ಹೇಳುವ ಶೆಟ್ಟರ್ ಅವರು ಪಕ್ಷದಲ್ಲಿ ಎಲ್ಲಾ ಹುದ್ದೆಗಳನ್ನು ಅಲಂಕರಿಸಿದ್ದಾರೆ. ತಾವು ಅಧಿಕಾರದಲ್ಲಿ ಇದ್ದಾಗ ಎಲ್ಲರಿಗೂ ಟಿಕೆಟ್ ಕೊಡಿಸಿದ್ದಾರಾ ಎಂದು ಕಟೀಲ್ ಸವಾಲು ಹಾಕಿದರು.
ಶೆಟ್ಟರ್ ಪಕ್ಷಾಂತರದಿಂದ ಬಿಜೆಪಿ ವಿಚಲಿತವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹುಬ್ಬಳ್ಳಿ ಹತ್ತಾರು ಪ್ರದೇಶಗಳ ಕೇಂದ್ರ ಸ್ಥಾನ. ಹೀಗಾಗಿ ಎಲ್ಲ ನಾಯಕರು ಇಲ್ಲಿ ಬರುತ್ತಿದ್ದಾರೆ. ಶೆಟ್ಟರ್ ಕಾರಣಕ್ಕೆ ಯಾರೂ ಇಲ್ಲಿಗೆ ಬರುತ್ತಿಲ್ಲ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ದುರ್ಬಲ ಇದೆ ಎಂದು ಮೋದಿ ಇಲ್ಲಿಗೆ ಬರುತ್ತಿಲ್ಲ. ಬೇರೆ ಕ್ಷೇತ್ರಕ್ಕೆ ಪ್ರಚಾರಕ್ಕೆ ಬಂದಂತೆ ಇಲ್ಲಿಗೂ ಮೋದಿಯವರು ಬರುತ್ತಿದ್ದಾರೆ. ಬಿಜೆಪಿಯನ್ನು 224 ಕ್ಷೇತ್ರದಲ್ಲಿ ಗೆಲ್ಲಿಸಲು ಮೋದಿಯವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ಹೇಳಿದ್ರು.
ಬಿಜೆಪಿ ಎಲ್ಲ ವರ್ಗದ ಜನರ ಜೊತೆ ಮಾತನಾಡುತ್ತಿದೆ. ಒಂದು ಸಮುದಾಯದ ಓಲೈಕೆ ಮಾಡೋ ಕೆಲಸವನ್ನು ಬಿಜೆಪಿ ಮಾಡಿಲ್ಲ. ರಾಜ್ಯದಲ್ಲಿ ಬಿಜೆಪಿ ನೇತೃತ್ವದಲ್ಲಿ ಸರ್ಕಾರಕ್ಕೆ ಅಧಿಕಾರಕ್ಕೆ ಬರುತ್ತದೆ. ಈ ಬಾರಿ 75 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗಿದೆ. ಡಬಲ್ ಎಂಜಿನ್ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದ್ರು.
ಇಡೀ ರಾಜ್ಯದಲ್ಲಿ ರಾಜ್ಯ ಮತ್ತು ಕೇಂದ್ರ ನಾಯಕರ ಪ್ರವಾಸವನ್ನು ಆಯೋಜಿಸಲಾಗಿದೆ. ನಿನ್ನೆ ರಾಜ್ಯಾದ್ಯಂತ ಮಹಾ ಪ್ರಚಾರ ಅಭಿಯಾನ ಯಶಸ್ವಿಯಾಗಿ ನಡೆದಿದೆ. ಇನ್ನು ಈ ಬಾರಿ ಯಡಿಯೂರಪ್ಪ ಮಾರ್ಗದರ್ಶನದ, ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು, ರಾಜ್ಯದಲ್ಲಿ ಮೀಸಲಾತಿ ವಿಚಾರದಲ್ಲೂ ಬಿಜೆಪಿ ಎಲ್ಲ ಸಮುದಾಯಕ್ಕೆ ನ್ಯಾಯವನ್ನು ಒದಗಿಸಿದೆ. ಆದರೆ ಕಾಂಗ್ರೆಸ್ ಜಾತಿ ಹೆಸರಲ್ಲಿ ರಾಜಕಾರಣ ಮಾಡುತ್ತಿದೆ. ವೀರಶೈವ ಲಿಂಗಾಯತ ಸಮುದಾಯಗಳನ್ನು ಒಡೆಯುವ ಕೆಲಸ ಮಾಡುತ್ತಿದೆ. ಜೊತೆಗೆ ಲಿಂಗಾಯತ ಸಮುದಾಯದ ಬಗ್ಗೆ ಸಿದ್ಧರಾಮಯ್ಯ ಹೀನವಾಗಿ ಮಾತನಾಡಿದ್ದಾರೆ. ಈ ಮೂಲಕ ಸಿದ್ಧರಾಮಯ್ಯ ತುಷ್ಠೀಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಧರ್ಮದ ಆಧಾರದ ಮೇಲೆ ರಚನೆಯಾಗಿರುವ ಮೀಸಲಾತಿ ಭಾರತದ ಸಂವಿಧಾನಕ್ಕೆ ವಿರುದ್ಧವಾಗಿದೆ: ಯೋಗಿ ಆದಿತ್ಯನಾಥ್