ಹುಬ್ಬಳ್ಳಿ: ಶ್ರೀಕಾಂತ ಪೂಜಾರಿ ಅವರನ್ನು ರೌಡಿಶೀಟರ್ನಿಂದ ಹೊರಗಡೆ ತಂದಿರುವುದೇ ನಮ್ಮ ಸರ್ಕಾರ. ಕಾನೂನು ಪ್ರಕಾರ ಕ್ರಮಗಳು ಆಗುತ್ತಿರುತ್ತವೆ. ಶ್ರೀಕಾಂತ್ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಸಚಿವ ದಿನೇಶ ಗುಂಡೂರಾವ್ ಆರೋಪಿಸಿದರು.
ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಮಗೆ ಶ್ರೀಕಾಂತ್ ಪೂಜಾರಿ ಯಾರು ಎಂಬುದೇ ಗೊತ್ತಿಲ್ಲ. ಆತನಿಗಾಗಿ ಬಿಜೆಪಿಯವರು ಸುಮ್ಮನೆ ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದಾರೆ. ಕೇಂದ್ರದಿಂದ ಬರುವ ಜಿಎಸ್ಟಿ ಹಣಕ್ಕಾಗಿ ಹೋರಾಟ ಮಾಡಬೇಕು. ಒಂದು ರೂಪಾಯಿ ಹಣವೂ ಬಂದಿಲ್ಲ. ನರೇಂದ್ರ ಮೋದಿ ಸರ್ಕಾರದಿಂದ ನಮಗೆ ಅನ್ಯಾಯ ಆಗಿದೆ ಎಂದು ಆರೋಪಿಸಿದ ಗುಂಡೂರಾವ್, ಶ್ರೀಕಾಂತ್ ಪೂಜಾರಿ ರೌಡಿಶೀಟರ್, ಕ್ರಿಮಿನಲ್. ಆತನ ಮೇಲಿರುವ ರೌಡಿಶೀಟರ್ನಿಂದ ಮುಕ್ತಿ ಕೊಟ್ಟಿರುವುದು ನಮ್ಮ ಸರ್ಕಾರ. ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಆತನನ್ನು ಬಂಧನ ಮಾಡಿದ್ದಾರೆ ಎಂದರು.
ರಾಮಮಂದಿರ ಉದ್ಘಾಟನೆ ವಿಚಾರಕ್ಕೆ ಮಾತನಾಡಿದ ಅವರು, ರಾಮಮಂದಿರ ಆಗುತ್ತಿರುವುದು ಸಂತೋಷ. ಪ್ರತಿ ಗ್ರಾಮದಲ್ಲಿಯೂ ರಾಮಮಂದಿರಗಳು ಇವೆ. ಹಿಂದುತ್ವವು ಒಬ್ಬರ ಹಾಗೂ ಪಕ್ಷವೊಂದರ ಆಸ್ತಿ ಅಲ್ಲ, ಅದಕ್ಕೆ ಇತಿಹಾಸ ಇದೆ ಎಂದು ಹೇಳಿದರು.
ಶ್ರೀಕಾಂತ್ ಪೂಜಾರ ಮೇಲೆ ಕೇಸ್ ಹಾಕಿದರೇ ನಮಗೇನು ಲಾಭ: ಸಂತೋಷ ಲಾಡ್
ಸಚಿವ ಸಂತೋಷ ಲಾಡ್ ಕಿಡಿ: ರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅವರಿಂದ ಹಿಂದೂಗಳಿಗೆ ಏನಾದರೂ ಲಾಭ ಆಗಿದೆಯಾ ಎಂದು ಸಚಿವ ಸಂತೋಷ ಲಾಡ್ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಸೇವಕ ಶ್ರೀಕಾಂತ್ ಪೂಜಾರಿ ಮೇಲೆ ಕೇಸ್ ಹಾಕಿದರೆ ನಮಗೇನು ಲಾಭ? ಈಗಾಗಲೇ ಆತನ ಮೇಲೆ ಹಲವಾರು ಪ್ರಕರಣಗಳಿವೆ. ಇನ್ನೊಂದು ಸಲ ಕೋರ್ಟ್ಗೆ ಹೋದರೆ ಏನು ಆಗುತ್ತಿತ್ತು. ಆದರೆ, ಇಂತಹದ್ದೇ ಬಿಜೆಪಿಗರಿಗೆ ಬೇಕು. ಹಾಗಾಗಿ, ಪ್ರತಿಭಟನೆ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಎಂದು ಟೀಕಿಸಿದರು.
ರಾಮಮಂದಿರ ಮಾಡಿದವರು ನಾವು, ರಾಮಮಂದಿರಕ್ಕೆ ಕೊಟ್ಟ ಇಟ್ಟಿಗೆ ಎಲ್ಲಿ ಹೋಯಿತು? ರಾಮ ಮಂದಿರದ ಪಕ್ಕದ ಜಮೀನಿನ ವಿಚಾರದಲ್ಲಿ ಭ್ರಷ್ಟಾಚಾರ ಆಗಿದೆ. ಜಮೀನಿನ ಬೆಲೆ ಹೆಚ್ಚಳ ಮಾಡಿ ಭ್ರಷ್ಟಾಚಾರ ಎಸಗಿದ್ದಾರೆ. ಈ ಮೂಲಕ ಅಲ್ಲಿರುವ ಪದಾಧಿಕಾರಿಗಳು ಕೋಟ್ಯಂತರ ರೂಪಾಯಿ ಲಾಭ ಪಡೆದುಕೊಂಡಿದ್ದಾರೆ. ಒಂದು ಅಂದಾಜಿನ ಪ್ರಕಾರ 17 ಲಕ್ಷಕ್ಕೆ ಭೂಮಿ ತಗೊಂಡು ಮೂರು ಕೋಟಿಗೆ ಮಾರಾಟ ಮಾಡಲಾಗಿದೆ. ಇದರ ಬಗ್ಗೆ ಯಾರು ಹೋರಾಟ ಮಾಡಬೇಕು ಎಂದು ಪ್ರಶ್ನೆ ಮಾಡಿದರು.
ಲೋಕಸಭಾ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿ, ಲೋಕಸಭಾ ಚುನಾವಣೆಗೆ ನಿಲ್ಲಲು ನನಗೆ ಆಸೆಯಿಲ್ಲ. ನಾನು ಆಕಾಂಕ್ಷಿಯೂ ಅಲ್ಲ ಎಂದು ಸ್ಪಷ್ಟನೆ ನೀಡಿದರು. ಪ್ರಧಾನಿ ಮೋದಿ ವಿಶ್ವಗುರು ಅಂತಾರೆ, ಅವರಿಗೆ ಇಷ್ಟು ಪ್ರಚಾರ ಬೇಕಾ? ನೀರಲ್ಲಿ ಹೋದ್ರು ಕ್ಯಾಮರಾ ಬೇಕಾ? ಅವರು ಒಂದು ತಿಂಗಳು ಟಿವಿ ಬಂದ್ ಮಾಡಿ ಮತ ಕೇಳಲಿ ಎಂದು ಲಾಡ್ ಹರಿಹಾಯ್ದರು.
ಇದನ್ನೂ ಓದಿ: ಮೂವರು ಡಿಸಿಎಂ ನೇಮಕ ಗಾಳಿ ಸುದ್ದಿ, ಚರ್ಚೆ ನಡೆದಿಲ್ಲ: ಗೃಹ ಸಚಿವ ಪರಮೇಶ್ವರ್