ಹುಬ್ಬಳ್ಳಿ : ಬಿಜೆಪಿ ನಾಯಕರಿಗೆ ಆಡಳಿತ ನಡೆಸಲು ಬರುವುದಿಲ್ಲ. ಕಾಂಗ್ರೆಸ್ಗೆ ಸಮರ್ಥವಾಗಿ ವಿಪಕ್ಷದಲ್ಲಿ ಪ್ರಶ್ನಿಸಲು ಬರುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಲೇವಡಿ ಮಾಡಿದ್ದಾರೆ.
ಸದಾ ಆಡಳಿತ ಮಾಡಿಕೊಂಡು ಬಂದಿರುವ ಕಾಂಗ್ರೆಸ್ಗೆ ವಿರೋಧ ಸ್ಥಾನದಲ್ಲಿ ಕುಳಿತುಕೊಳ್ಳುವುದು ಕಷ್ಟ. ಬದಲಿಗೆ ಆಡಳಿತ ನಡೆಸಿ, ಯೋಜನೆ ರೂಪಿಸುವುದು ಸುಲಭ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಾಜ್ಯ ಬಿಜೆಪಿಗೆ ಕೇಂದ್ರ ಸರ್ಕಾರದಿಂದ ಬರಬೇಕಿದ್ದ ಹಣ ಬಾಕಿ ಉಳಿದಿದೆ. ಹಾಗಾಗಿ ರಾಜ್ಯ ಆಡಳಿತ ಯಂತ್ರವನ್ನು ವ್ಯವಸ್ಥಿತವಾಗಿ ನಡೆಸಲು ಆಗುತ್ತಿಲ್ಲ ಎಂದರು.
ಸಿಎಎ, ಎನ್ಆರ್ಸಿ ಕುರಿತು ಸಲಹಾ ಸಭೆ: ಸಿಎಎ ಹಾಗೂ ಎನ್ಆರ್ಸಿ ಬಗೆಗೆ ಸಲಹೆಗಾಗಿ ಪ್ರಧಾನಿಗೆ ಒಂದು ತಿಂಗಳ ಹಿಂದೆ ಪತ್ರ ಬರೆದೆ. ಈ ಕುರಿತು ಸಲಹಾ ಸಭೆಯಲ್ಲಿ ಮಾತುಕತೆ ನಡೆಸಲು ಮನವಿ ಮಾಡಿದ್ದೆ. ಪತ್ರದಲ್ಲಿ ಮತೀಯ ಅಲ್ಪಸಂಖ್ಯಾತರು ಎಂಬುದನ್ನು ಅಳಸಿ ಅಲ್ಪಸಂಖ್ಯಾತರು ಎಂದು ನಮೂದಿಸುವಂತೆ ಸಲಹೆ ನೀಡಲಾಗಿತ್ತು. ಪ್ರಧಾನಿ ಕಚೇರಿಯಿಂದ ಉತ್ತರ ಬಂದಿದೆ. ಇದಕ್ಕೆ ಕೇಂದ್ರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಅದೇ ರೀತಿ ಎನ್ಆರ್ಸಿ ಬಗ್ಗೆ ಕೆಲವು ಸಲಹೆ, ಮಾಹಿತಿ ಕೇಳಿ ಪತ್ರ ಬರೆದಿದ್ದು, ದಾಖಲೆಗಳನ್ನು ಕೇಳಲ್ಲ ಎಂದು ಶಾ ತಿಳಿಸಿದ್ದಾರೆ. ಈ ಕುರಿತು ಕೂಡಲೇ ಸರ್ಕಾರದಿಂದ ಸುತ್ತೋಲೆ ಹೊರಡಿಸಬೇಕು ಎಂದು ಆಗ್ರಹಿಸಿದರು.
ಕೊರೊನಾ ಭೀತಿ: ಕೊರೊನಾ ವೈರಸ್ ತಡೆಗೆ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹ ಎಂದು ಇದೇ ವೇಳೆ ಕೇಂದ್ರದ ಮಾಜಿ ಸಚಿವ ಸಿ ಎಂ ಇಬ್ರಾಹಿಂ ತಿಳಿಸಿದರು.