ಹುಬ್ಬಳ್ಳಿ: ನಗರದ ಹೃದಯ ಭಾಗದಲ್ಲಿರುವ ಇಎಸ್ಐ ಆಸ್ಪತ್ರೆಗೆ ದಿನನಿತ್ಯವೂ ನೂರಾರು ಸಂಖ್ಯೆಯಲ್ಲಿ ಜನ ಬಂದು ಹೋಗ್ತಾರೆ. ಅದರಲ್ಲೂ ಕೊರೊನಾ ಬಂದ ಮೇಲಂತೂ ಅದರ ಸಂಖ್ಯೆ ದ್ವಿಗುಣವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಆವರಣದಲ್ಲಿರುವ ಬೈಕ್ಗಳನ್ನೇ ಎಗರಿಸುತ್ತಿದ್ದಾರೆ. ಸದ್ಯ ಬೈಕ್ ಕಳ್ಳತನ ಮಾಡುತ್ತಿರುವ ದೃಶ್ಯ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಬ್ಬಂದಿಯನ್ನ ಆತಂಕಕ್ಕೆ ದೂಡಿದೆ.
ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಬೈಕ್ಗಳ್ಳರ ಹಾವಳಿ ಹೆಚ್ಚಾಗಿದೆ. ಸ್ವಲ್ಪ ಕತ್ತಲಾದರೆ ಸಾಕು ಈ ಖದೀಮರ ಗ್ಯಾಂಗ್ ಆಸ್ಪತ್ರೆಯ ಆವರಣದಲ್ಲಿರುವ ಬೈಕ್ಗಳನ್ನ ಕದಿಯಲು ಆರಂಭಿಸುತ್ತೆ. ಕಳೆದ ತಿಂಗಳು ಕೂಡ ಎರಡು ಬೈಕ್ ಕಳ್ಳತನ ಮಾಡಿದ್ದ ಟೀಂ ಮತ್ತೆ ಆಸ್ಪತ್ರೆಯ ಆವರಣಲ್ಲಿ ನಿಲ್ಲಿಸಿದ್ದ ಹೊಂಡಾ ಆ್ಯಕ್ಟಿವಾ ಸ್ಕೂಟರ್ ಲಾಕ್ ಮುರಿದು ಅಲ್ಲಿಂದ ಎಸ್ಕೇಪ್ ಮಾಡಲಾಗಿದೆ.
ಸಿಸಿಟಿವಿಯಲ್ಲಿ ಖದೀಮನ ಚಲನವಲನ ಸೆರೆಯಾಗಿದೆ. ಹೀಗಾಗಿ ಸದ್ಯ ಆಸ್ಪತ್ರೆ ಸಿಬ್ಬಂದಿ ಆವರಣದಲ್ಲಿ ರಾತ್ರಿ ಹೊತ್ತು ಬೈಕ್ ನಿಲ್ಲಿಸುವುದಕ್ಕೆ ಹೆದರುತ್ತಿದ್ದಾರೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.