ಹುಬ್ಬಳ್ಳಿ (ಧಾರವಾಡ): ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾಗುತ್ತಿದ್ದು ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಈ ಹಿನ್ನೆಲೆ ಎಲ್ಲೆಡೆ ರಾಷ್ಟ್ರ ಧ್ವಜ ತಯಾರಿ ಜೋರಾಗಿ ನಡೆಯುತ್ತಿದೆ. ಆದರೆ ಈಗಾಗಲೇ ಫ್ಲ್ಯಾಗ್ ಕೋಡ್ ಆಫ್ ಇಂಡಿಯಾ 2002 ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದು, ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆ ಕಾರ್ಯದರ್ಶಿ ಶಿವಾನಂದ ಮಠಪತಿ ಅವರು ಆತಂಕ ವ್ಯಕ್ತಪಡಿಸಿದರು.
ಆತಂಕ.. ಹುಬ್ಬಳ್ಳಿ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ರಾಷ್ಟ್ರ ಧ್ವಜ ತಯಾರಾಗುತ್ತದೆ. ರಾಷ್ಟ್ರ ಧ್ವಜವನ್ನು ಖಾದಿ ಬಟ್ಟೆಯಲ್ಲಿ ನೋಡುವುದೇ ಚೆಂದ. ಆದರೆ ಫ್ಲ್ಯಾಗ್ ಕೋಡ್ ಆಫ್ ಇಂಡಿಯಾ 2002 ಕಾಯ್ದೆಯನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿ ಪಾಲಿಸ್ಟರ್ ಬಟ್ಟೆಗಳಿಂದ ರಾಷ್ಟ್ರ ಧ್ವಜವನ್ನ ತಯಾರು ಮಾಡಬಹುದು. ಅಷ್ಟೇ ಅಲ್ಲದೇ ಮಶೀನ್ಗಳ ಮೂಲಕ ಧ್ವಜ ತಯಾರಿಸಬಹುದೆಂದು ತಿದ್ದುಪಡಿ ತಂದಿದೆ. ಈ ಮೂಲಕ ಬಟ್ಟೆ ಮಿಲ್ಗಳಲ್ಲಿ ಖಾಸಗಿ ಕಂಪನಿಯವರು ರಾಷ್ಟ್ರ ಧ್ವಜ ತಯಾರಿ ಮಾಡಬಹುದಾಗಿದೆ. ಇದರಿಂದ ರಾಷ್ಟ್ರ ಧ್ವಜದ ಗೌರವ, ಮಹತ್ವ ಕಡಿಮೆ ಆಗುತ್ತಿದೆ ಎಂದು ಖಾದಿ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ದೇಶಾದ್ಯಂತ ಪೂರೈಕೆಯಾಗುತ್ತಿತ್ತು ಬೆಂಗೇರಿಯ ಖಾದಿ ಧ್ವಜ.. ದೇಶದ ಮೂಲೆ ಮೂಲೆಗೂ ಬೆಂಗೇರಿ ಖಾದಿ ಕೇಂದ್ರದಿಂದಲೇ ರಾಷ್ಟ್ರ ಧ್ವಜ ಪೂರೈಕೆ ಆಗುತ್ತಿತ್ತು. ಕೇಂದ್ರ ಸರ್ಕಾರ ಕಾಯ್ದೆಯಲ್ಲಿ ತಿದ್ದುಪಡಿ ತಂದಿದ್ದರಿಂದ ಈ ರಾಷ್ಟ್ರದ್ವಜ ತಯಾರಿಕಾ ಕೇಂದ್ರಕ್ಕೆ ನುಂಗಲಾರದ ತುತ್ತಾಗಿದೆ. ಇದೊಂದು ವ್ಯವಹಾರದ ವಿಷಯವಲ್ಲ. ದೇಶಾಭಿಮಾನದ ಸಂಕೇತ. ವಿದೇಶಾಂಗ ರಾಯಭಾರಿ ಕಚೇರಿಗಳಲ್ಲಿಯೂ ಬೆಂಗೇರಿಯಲ್ಲಿ ತಯಾರಿಸಿದ ರಾಷ್ಟ್ರ ಧ್ವಜ ಹಾರಾಟವಾಗುತ್ತಿತ್ತು. ಆದರೆ ಈಗ ಎಲ್ಲವೂ ಬದಲಾಗುತ್ತಿದೆ ಎಂದಿದ್ದಾರೆ.
ಸಿಗದ ಅನುಮತಿ.. ಕೇಂದ್ರ ಸರ್ಕಾರ ಹರ ಘರ್ ತಿರಂಗಾ ಅಭಿಯಾನಕ್ಕೆ ಕೈ ಹಾಕಿದೆ. ಹೆಚ್ಚಿನ ಸಂಖ್ಯೆಯ ಮನೆಗಳ ಮೇಲೆ ಸುಮಾರು 10 ಕೋಟಿ ಧ್ವಜಗಳನ್ನು ಹಾರಾಡಿಸುವ ಗುರಿ ಹೊಂದಿದೆ. ಇದಕ್ಕೆ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆ ರಾಷ್ಟ್ರ ಧ್ವಜ ನಿರ್ಮಾಣಕ್ಕೆ ಸಿದ್ಧವಿತ್ತು. ನಾನ್ ಬಿಐಎಸ್ ಮಾನದಂಡದಲ್ಲಿ ಧ್ವಜ ತಯಾರಿಕೆಗೆ ಅನುಮತಿ ನೀಡಿದರೆ ಗೌರವಯುತವಾಗಿ ಧ್ವಜ ತಯಾರಿಸಲು ಸಂಸ್ಥೆ ತಯಾರಿತ್ತು. ಆದ್ರೆ ಸರ್ಕಾರ ನಮಗೆ ಅನುಮತಿ ನೀಡಿಲ್ಲ ಎಂದು ಸಂಸ್ಥೆ ಕಾರ್ಯದರ್ಶಿ ಶಿವಾನಂದ ಮಠಪತಿ ತಿಳಿಸಿದರು.
ಇದನ್ನೂ ಓದಿ: ಹರ್ ಘರ್ ತಿರಂಗಾ: ಬಾಗಲಕೋಟೆ ಮಹಿಳೆಯರಿಂದ ರಾಷ್ಟ್ರಧ್ವಜ ನಿರ್ಮಾಣ ಕಾರ್ಯ
ವರ್ಷವಿಡೀ ಧ್ವಜ ತಯಾರಿಯಲ್ಲಿ ತೊಡಗಿದ್ದ ಸಾವಿರಾರು ಬಡ ಕುಟುಂಬಗಳಿಗೂ ಇದರಿಂದ ಹೆಚ್ಚು ಅನುಕೂಲವಾಗುತ್ತಿತ್ತು. ರಾಷ್ಟ್ರ ಧ್ವಜದ ಗೌರವವು ಹೆಚ್ಚುತ್ತಿತ್ತು. ಆದರೆ ಖಾದಿ ಧ್ವಜಕ್ಕೆ ಬೆಲೆ ಹೆಚ್ಚು ಎನ್ನುವ ಕಾರಣ ನೀಡಿ ನಮ್ಮ ಧ್ಬಜ ಖರೀದಿಗೆ ಮುಂದಾಗದಿರುವುದು ಬೇಸರದ ಸಂಗತಿ ಎಂದರು. ಅಲ್ಲದೇ ಕಡಿಮೆ ಬೆಲೆಯಲ್ಲಿ ಸಿಗುವ ರಾಷ್ಟ್ರ ಧ್ವಜವನ್ನು ಒಂದೆರಡು ದಿನಕ್ಕೆ ಬಳಸಿ ಮತ್ತೆ ಅದಕ್ಕೆ ಮಹತ್ವ ನೀಡುವುದಿಲ್ಲವೆಂದು ಆತಂಕ ವ್ಯಕ್ತಪಡಿಸಿದರು.