ಧಾರವಾಡ: ಜಿಲ್ಲೆಯ ಅಳ್ನಾವರದಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಪ್ರವಾಹ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದರು.
ಬಳಿಕ ಮಾತನಾಡಿದ ಅವರು, ಸಾವಿರಾರು ಜನ ಮನೆ ಕಳೆದುಕೊಂಡಿದ್ದಾರೆ. ಯಾರು ತೀರಾ ಬಡವರು ಇದಾರೆ ಅದರಲ್ಲಿ ಐನೂರು ಜನರಿಗೆ ಅಗತ್ಯ ವಸ್ತುಗಳನ್ನು ನೀಡುತ್ತಿದ್ದೇವೆ. ಬ್ಲ್ಯಾಕೇಟ್, ಸೀರೆ, ಟವೆಲ್, ಲುಂಗಿ, ಮಂಕಿ ಕ್ಯಾಪ್ ಹಾಗೂ ಟೀ ಶರ್ಟ್ವುಳ್ಳ ಸುಮಾರು 800 ರೂ. ಬೆಲೆಯ ಕಿಟ್ ನೀಡುತ್ತಿದ್ದೇವೆ. ಅವ್ವ ಸೇವಾ ಟ್ರಸ್ಟ್‌ನಿಂದ ಹಾಗೂ ನನ್ನ ಪತ್ನಿಯ ಜನ್ಮ ದಿನದ ಪ್ರಯುಕ್ತ ಈ ಕಾರ್ಯ ಮಾಡಿದ್ದೇವೆ ಎಂದರು.
ರಾಜ್ಯದಲ್ಲಿ ಪ್ರವಾಹ ಬಂದಾಗ ಸಚಿವ ಸಂಪುಟ ಇಲ್ಲದೇ ಇರೋದು ನೋವಿನ ಸಂಗತಿ. ಸಿಎಂ ಒಬ್ಬರೇ 17 ದಿನದಿಂದ ಕೆಲಸ ಮಾಡ್ತಾ ಇರುವುದು ಇತಿಹಾಸದಲ್ಲಿಯೇ ಇದೇ ಮೊದಲು. ಯಾವ ಮಂತ್ರಿಗಳು ಇಲ್ಲದೇ ಹೇಗೆ ಸರ್ಕಾರ ನಡಿಸ್ತಾ ಇದ್ದಾರೆ ಗೊತ್ತಿಲ್ಲ ಎಂದು ಯಡಿಯೂರಪ್ಪ ಸರ್ಕಾರದ ವಿರುದ್ಧ ಹರಿಹಾಯ್ದರು.
ಮುಖ್ಯಮಂತ್ರಿಯನ್ನು ನೋಡಿದರೆ ಪಾಪ ಅನಿಸುತ್ತಿದೆ. ಜನಪ್ರತಿನಿಧಿಗಳು ಇಲ್ಲದೇ ಪ್ರಜಾಪ್ರಭುತ್ವ ನಡೆಯದು. ಅವರೊಬ್ಬರೇ ಓಡಾಡ್ತಾ ಇದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಅನರ್ಹರ ಬಗ್ಗೆ ಚಿಂತೆ ಮಾಡುವುದನ್ನು ಬಿಟ್ಟು ಕೆಲವು ಮಹತ್ವದ ಖಾತೆಗಳನ್ನು ಹಂಚಿಕೆ ಮಾಡಿ ಸಚಿವರನ್ನು ಪರಿಹಾರ ಕಾರ್ಯಕ್ಕೆ ಕಳಿಸಿಕೊಡಬೇಕು ಎಂದರು.
ಪ್ರವಾಹಪೀಡಿತ ಜನರ ಗೋಳು ನೋಡಿದರೆ ಕರಳು ಕಿತ್ತು ಬರುತ್ತಿದೆ. ಇದನ್ನು ನೋಡಿಯಾದರೂ ಬೇಗ ಸಚಿವ ಸಂಪುಟ ರಚನೆ ಮಾಡಬೇಕು. ಜನಪ್ರತಿನಿಧಿಗಳಂತೆ ಅಧಿಕಾರಿಗಳಿಗೆ ಕೆಲಸ ಮಾಡಲು ಬರುವುದಿಲ್ಲ. ಅದಕ್ಕೆ ಸಚಿವರೇ ಬೇಕು. ಕೇಂದ್ರ ಸರ್ಕಾರಕ್ಕೆ ಕಣ್ಣು ಮತ್ತು ಕಿವಿ ಇಲ್ಲವೇ ಇಲ್ಲ. ಇಷ್ಟೆಲ್ಲ ಹಾನಿಯಾದರೂ ರಾಷ್ಟ್ರೀಯ ವಿಪತ್ತು ಘೋಷಣೆ ಮಾಡಿಲ್ಲ. ಗೃಹ ಸಚಿವರು ಮತ್ತು ಪ್ರಧಾನಿಯಿಂದ ಮಾತ್ರ ರಾಷ್ಟ್ರೀಯ ವಿಪತ್ತು ಘೋಷಣೆ ಸಾಧ್ಯ. ಅಮಿತ್ ಶಾ ಬೆಳಗಾವಿಗೆ ಆಗಮಿಸಿದ್ದಾರೆ. ಈಗಲಾದರು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.