ಹುಬ್ಬಳ್ಳಿ: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ತಹಶೀಲ್ದಾರರ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಭೂ ಸುಧಾರಣೆ ಹೊಸ ಕಾಯ್ದೆಯನ್ನು ತರಲು ಮುಂದಾಗಿರುವ ರಾಜ್ಯ ಸರ್ಕಾರದ ನಿಲುವು ಖಂಡನೀಯ. ಸರ್ಕಾರದ ಈ ಆಘಾತಕಾರಿ ನಿರ್ಧಾರದಿಂದ ಕೃಷಿ ಕ್ಷೇತ್ರ ಸರ್ವನಾಶದತ್ತ ಸಾಗುವುದರಲ್ಲಿ ಸಂದೇಹವಿಲ್ಲ. ರೈತರು ಕೃಷಿ ಆಧಾರಿತ ಸಮಸ್ತ ಗ್ರಾಮೀಣ ಸಾಮಾಜಿಕ, ಆರ್ಥಿಕ ವ್ಯವಸ್ಥೆ ಈ ಕ್ರಮದಿಂದ ಕುಸಿದು ಬೀಳುವುದು ಖಚಿತ. ಕೊರೊನಾ ಮಹಾಮಾರಿಯಿಂದ ಸಮಸ್ತ ಮಾನವ ಕುಲವೇ ತತ್ತರಿಸಿದ ಸಂದರ್ಭದಲ್ಲಿ ರೈತರು ಕೃಷಿ ಕಾರ್ಯದಿಂದ ವಂಚಿತರಾಗಿದ್ದಾರೆ. ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿಗೆ ಮಣಿದು ರಾಜ್ಯ ಸರ್ಕಾರ ಭೂಸುಧಾರಣೆ ಮಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆಯನ್ನು ತಿದ್ದುಪಡಿ ವಿಚಾರವನ್ನು ಕೈ ಬೀಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಮಾಡಿದರು.