ಹುಬ್ಬಳ್ಳಿ: ಸುಡು ಬಿಸಿಲಿನಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರು ಬಾಯಾರಿಕೆಯಿಂದ ಬಳಲಬಾರದೆಂದು ಚಪ್ಪಲಿ ಕಾಯುವ ಕಾಯಕಯೋಗಿಯೊಬ್ಬರು ತಾವೇ ಖುದ್ದಾಗಿ 'ಶುದ್ಧ ನೀರಿನ ಘಟಕ'ದಿಂದ ನೀರು ತಂದು ಭಕ್ತರ ದಾಹ ತಣಿಸುವ ಮೂಲಕ ಗಮನ ಸೆಳೆದಿದ್ದಾರೆ.
ಹೌದು, ಮೂರುಸಾವಿರ ಮಠದ ಆವರಣದಲ್ಲಿ ಚಪ್ಪಲಿ ಕಾಯುವ ಬಾಳಣ್ಣ ತೊರಗಲ್ ಎಂಬುವರು ತಮ್ಮ ಕಾಯಕದ ಜೊತೆ ನೀರು ದಾಸೋಹ ಮಾಡುತ್ತಿದ್ದು, ಈ ನಿಸ್ವಾರ್ಥ ಸೇವೆ ಕಂಡು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಠದ ಆವರಣದಲ್ಲಿ ಚಪ್ಪಲಿ ಸ್ಟ್ಯಾಂಡ್ ಇಟ್ಟುಕೊಂಡಿರುವ ಬಾಳಣ್ಣ, ಮಠಕ್ಕೆ ಬಂದ ಭಕ್ತರಿಗೆ ನೀರು ಕೊಟ್ಟು ದಾಹ ನೀಗಿಸುತ್ತಿದ್ದಾರೆ.
ಇಲ್ಲಿಗೆ ಬರುವ ಭಕ್ತರ ಯೋಗಕ್ಷೇಮ ವಿಚಾರಿಸುವ ಬಾಳಣ್ಣ, ಅವರ ಚಪ್ಪಲಿಗಳನ್ನು ತಮ್ಮ ಹತ್ತಿರ ಬಿಡಿಸಿಕೊಂಡು ಅಲ್ಲಿದ್ದ ನೀರು ಕೊಟ್ಟು ಉಪಚರಿಸುವುದು ಇವರ ನಿತ್ಯದ ಕಾಯಕ. ಭಕ್ತರ ದಾಹ ಅರಿತ ಬಾಳಣ್ಣ ಎರಡು ರೂ. ಕಾಯಿನ್ ಹಾಕಿ ತಾವೇ ಕ್ಯಾನ್ ತುಂಬಿಸಿಕೊಂಡು ಬರುತ್ತಾರೆ. ಹೀಗೆ ದಿನಕ್ಕೆ 10 ರಿಂದ 15 ಕ್ಕೂ ಹೆಚ್ಚು ಕ್ಯಾನ್ಗಳನ್ನು ತಂದು ಭಕ್ತರ ದಾಹ ತಣಿಸುತ್ತಾರೆ. ಕಳೆದ 44 ವರ್ಷಗಳಿಂದ ಮೂರು ಸಾವಿರ ಮಠದಲ್ಲಿ ಇದೇ ಕಾಯಕ ಮಾಡುತ್ತಿದ್ದಾರೆ ಎಂದು ಇವರ ಕಲ್ಮಶವಿಲ್ಲದ ಸೇವೆಯನ್ನ ಹೊಗಳುತ್ತಾರೆ ಸ್ಥಳೀಯರು.
ಭಕ್ತರು ಚಪ್ಪಲಿ ಬಿಡುವ ಮುನ್ನ ನೀಡುವ 2 ರೂ., 5 ರೂ. ಹಣವೇ ನಮ್ಮ ಕುಟುಂಬಕ್ಕೆ ಆದಾಯ. ಹಾಗಂತ ಚಪ್ಪಲಿ ನೋಡಿಕೊಳ್ಳುವುದಕ್ಕಾಗಿ ಯಾರ ಬಳಿಯೂ ಹಣ ಕೇಳುವುದಿಲ್ಲ. ಬದಲಾಗಿ ಅವರಾಗಿಯೇ ಕೊಟ್ಟರೆ ಮಾತ್ರ ಹಣ ತೆಗೆದುಕೊಳ್ಳುತ್ತೇನೆ. ಇದು ನನ್ನ ನಿಶ್ವಾರ್ಥ ಸೇವೆ ಅಷ್ಟೇ ಎನ್ನುತ್ತಾರೆ ಬಾಳಣ್ಣ ತೊರಗಲ್. ಒಟ್ಟಿನಲ್ಲಿ ಸುಡು ಬಿಸಿಲಿನಲ್ಲಿ ದೇವಸ್ಥಾನಕ್ಕೆ ಬಂದ ಭಕ್ತರಿಗೆ ನೀರು ಕೊಟ್ಟು ದಾಹ ಇಂಗಿಸುವ ಹುಬ್ಬಳ್ಳಿಯ ಈ ಭಗೀರಥನನ್ನು ಮೆಚ್ಚಲೇಬೇಕು.