ಹುಬ್ಬಳ್ಳಿ: ನಗರದಲ್ಲಿರುವ ಬಹುತೇಕ ಒಳಚರಂಡಿಗಳು ನಿರ್ವಹಣೆ ಇಲ್ಲದೇ ಹದಗೆಟ್ಟಿವೆ. ಒಳಚರಂಡಿ ನೀರು ತುಂಬಿ ರಸ್ತೆಗೆ ಬರುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದಲ್ಲಿರುವ ಮಾದವಪುರದ ಸಿಟಿ ಕ್ಲಿನಿಕ್ ಪಕ್ಕದ ಮ್ಯಾನ್ಹೊಲ್ ಒಡೆದು ಎಷ್ಟೋ ದಿನ ಕಳೆದರೂ ಅದನ್ನು ಸರಿಮಾಡುವ ಕಾರ್ಯಕ್ಕೆ ನಗರ ಪಾಲಿಕೆ ಮಾತ್ರ ಮುಂದಾಗಿಲ್ಲ. ಅಲ್ಲದೆ ದುರ್ಗಾದೇವಿ ಗುಡಿಯ ಮುಂಭಾಗದ ರಸ್ತೆ, ಭವಾನಿ ನಗರ, ಮಿನಿ ವಿಧಾನಸೌಧದ ಎದುರಿನ ಮ್ಯಾನ್ಹೋಲ್ ಸೇರಿದಂತೆ ನಗರದಲ್ಲಿ ಬಹುತೇಕ ಇಂತಹದ್ದೇ ಪರಿಸ್ಥಿತಿ ಇದ್ದು, ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ.
ಗಬ್ಬೆದ್ದು ನಾರುವ ಈ ವ್ಯವಸ್ಥೆಯಿಂದ ರಸ್ತೆಯಲ್ಲಿ ಸಂಚರಿಸುವ ಜನ ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ. ಚರಂಡಿಯ ಕಲ್ಮಶ ರಸ್ತೆ ಮೇಲೆ ಹರಿದು ಪಾದಾಚಾರಿಗಳು, ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ. ಹೀಗಿದ್ದರೂ ನಗರಪಾಲಿಕೆ ಅಧಿಕಾರಿಗಳು ಇತ್ತ ತಲೆಹಾಕಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.