ಧಾರವಾಡ : ಕೋವಿಡ್-19 ತಡೆಗೆ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಔಷಧಿಗಳನ್ನು ವಿತರಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಹೇಳಿದರು.
ಅವರು ಎಸ್‍ಪಿ ಕಚೇರಿ ಸಭಾಭವನದಲ್ಲಿ ಜಿಲ್ಲಾ ಆಯುಷ್ ಇಲಾಖೆ ಹಾಗೂ ಜಿಲ್ಲೆಯ ಆಯುಷ್ ವೈದ್ಯರು ನೀಡಿರುವ ಆಯುರ್ವೇದಿಕ್ ಚವನಪ್ರಾಶ್ ಮತ್ತು ಹೋಮಿಯೋಪತಿಯ ಅರ್ಸಾನಿಕ್ ಆಲ್ಬಂ ಮಾತ್ರೆಗಳನ್ನು ಪೊಲೀಸ್ ಪೇದೆಗಳಿಗೆ ವಿತರಿಸಿದ ಬಳಿಕ ಮಾತನಾಡಿದ ಅವರು, ಪೊಲೀಸ್ ಇಲಾಖೆಯ 753ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಚೆಕ್‍ಪೋಸ್ಟ್ ಸೇರಿ ವಿವಿಧೆಡೆ ನಿತ್ಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಆರೋಗ್ಯ ಪರೀಕ್ಷೆಯೊಂದಿಗೆ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಔಷಧಿ ನೀಡಲಾಗುತ್ತಿದೆ. ಇದು ಪರಿಣಾಮಕಾರಿ ಔಷಧ. ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಹೋಂ ಕ್ವಾರಂಟೈನ್‍ಲ್ಲಿರುವ ವ್ಯಕ್ತಿಗಳಿಗೂ ಆಯುಷ್ ಔಷಧಿ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಎಲ್ಲಾ ಸರ್ಕಾರಿ ಕ್ವಾರಂಟೈನ್ ಕೇಂದ್ರಗಳಲ್ಲಿ 70ಕ್ಕೂ ಹೆಚ್ಚು ಖಾಸಗಿ ಆಯುಷ್ ವೈದ್ಯರು ಸ್ವಯಂಪ್ರೇರಣೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾಲಯ, ಸಂಜೀವಿನಿ ಮೆಡಿಕಲ್ ಕಾಲೇಜು ಹಾಗೂ ಧಾರವಾಡದ ಬಿ ಡಿ ಜತ್ತಿ ಹೋಮಿಯೋಪತಿ ಮೆಡಿಕಲ್ ಕಾಲೇಜುಗಳು ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆಯಲು ಸಿದ್ಧತೆ ಮಾಡಿಕೊಂಡಿವೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಂಗಮೇಶ ಕಲಹಾಳ ಡಿವೈಎಸ್‍ಪಿ ರವಿ ನಾಯ್ಕ ತಿಳಿಸಿದರು.