ಧಾರವಾಡ: ದಿನದಿಂದ ದಿನಕ್ಕೆ ಮಕ್ಕಳ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಪೋಷಕರಲ್ಲಿ ಆತಂಕ ಮನೆಮಾಡಿದೆ. ಈ ಬೆನ್ನಲ್ಲೇ ಧಾರವಾಡ ತಾಲೂಕಿನ ಮನಸೂರ ಗ್ರಾಮದಲ್ಲೂ ಸಹ ಮಕ್ಕಳ ಕಳ್ಳತನ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂಬ ವದಂತಿ ಕೇಳಿ ಬಂದಿದ್ದು, ಈ ಕುರಿತು ಶಾಲಾ ಶಿಕ್ಷಕಕರು ದೂರು ಕೊಡಲು ಮುಂದಾಗಿದ್ದಾರೆ.
ನಾಲ್ಕು ದಿನಗಳ ಹಿಂದೆ ಮನಸೂರ ಗ್ರಾಮದ ಶಾಲಾ ಬಾಲಕನೊಬ್ಬನನ್ನು ಬೈಕ್ ಮೇಲೆ ಬಿಡುವುದಾಗಿ ಇಬ್ಬರು ಹೇಳಿದ್ದರಂತೆ. ಈ ವೇಳೆ ಬೈಕ್ ಮೇಲಿದ್ದವರನ್ನು ನೋಡಿ ಬಾಲಕ ಭಯಗೊಂಡು ಓಡಿ ಮನೆಗೆ ತಲುಪಿದ್ದಾನೆ. ಇದರಿಂದ ಆತಂಕಗೊಂಡ ಗ್ರಾಮಸ್ಥರು ಶಿಕ್ಷಕರ ಜೊತೆ ಮಾತನಾಡಿ, ಪೊಲೀಸ್ ಠಾಣೆಗೆ ದೂರು ಕೊಡಲು ಒತ್ತಾಯಿಸಿದ್ದಾರೆ. ಪೋಷಕರ ಒತ್ತಾಯಕ್ಕೆ ಮಣಿದ ಶಾಲಾ ಮುಖ್ಯ ಶಿಕ್ಷಕ ದೂರು ಕೊಡಲು ಮುಂದಾಗಿದ್ದಾರೆ.
ಇದನ್ನೂ ಓದಿ: ಕುಡಿದ ಮತ್ತಲ್ಲಿ ಮಗು ಕಳ್ಳತನ ಮಾಡಲು ಯತ್ನಿಸಿದ ಆರೋಪಿ ಪೊಲೀಸರ ವಶಕ್ಕೆ
ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ಹಾವಳಿ ವಿಚಾರದ ಕುರಿತು ಮಾತನಾಡಿರುವ ಎಸ್ ಪಿ ಲೋಕೇಶ್, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸೂಚಿಸಿದ್ದಾರೆ. ಬೇರೆ ದೇಶದ ವಿಡಿಯೋವನ್ನ ಸಾಮಾಜಿಕ ತಾಣದಲ್ಲಿ ಬಿತ್ತರಿಸಿ, ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ಸುಳ್ಳು ವದಂತಿ ಹಬ್ಬಿಸಲಾಗುತ್ತಿದೆ. ಈ ಹಿನ್ನೆಲೆ ಅಪರಿಚಿತರು ಕಂಡು ಬಂದರೆ 112 ಕ್ಕೆ ಕರೆ ಮಾಡಿ, ಸ್ಥಳಕ್ಕೆ ಪೊಲೀಸರು ಬಂದು ವಿಚಾರಣೆ ಮಾಡುವ ವರೆಗೂ ಯಾರು ಕೂಡ ಅಮಾಯಕರ ಮೇಲೆ ಹಲ್ಲೆ ಮಾಡುವಂತಿಲ್ಲ. ಅಮಾಯಕರನ್ನು ಹಿಡಿದು ಹೊಡೆಯುವುದು ಮಾಡಿದ್ರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಎರಡು ದಿನದಲ್ಲಿ ಪೊಲೀಸರಿಂದ 42 ಮಕ್ಕಳ ರಕ್ಷಣೆ: ಅವರ ಭವಿಷ್ಯ ರೂಪಿಸಲು ಮುಂದಾದ ಅಸ್ಸೋಂ ಸಿಎಂ ಶರ್ಮಾ