ಕಲಬುರಗಿ: ವಾಹನ ತಪಾಸಣೆ ವೇಳೆ ಯುವಕನೋರ್ವ ಮಹಿಳಾ ಎಎಸ್ಐ ಮೇಲೆಯೇ ಹಲ್ಲೆ ಮಾಡಿರುವ ಘಟನೆ ನಗರದ ರಾಷ್ಟ್ರಪತಿ (ಜೇವರ್ಗಿ ಕ್ರಾಸ್) ವೃತ್ತದಲ್ಲಿ ನಡೆದಿದೆ.
ಅಶೋಕ ನಗರ ಠಾಣೆಯ ಎಎಸ್ಐ ಸುಮಂಗಲಾ ಎಂಬುವವರ ಮೇಲೆ ಕಲಬುರಗಿ ತಾಲೂಕಿನ ಜೋಗುರು ಗ್ರಾಮದ ಮಹೇಶ ಹೂಗಾರ ಎಂಬಾತ ಹಲ್ಲೆ ಮಾಡಿದ್ದಾನೆ ಎಂದು ದೂರು ದಾಖಲಾಗಿದೆ.
ಮಹೇಶ ತನ್ನ ದ್ವಿಚಕ್ರ ವಾಹನದ ಮೇಲೆ ಹೊರಟಿರುವಾಗ ಕರ್ತವ್ಯದಲ್ಲಿದ್ದ ಎಎಸ್ಐ ಸುಮಂಗಲಾ ಬೈಕ್ ತಡೆದು ಪರಿಶೀಲನೆಗೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸ್ ಮೇಲೆೇ ಹಲ್ಲೆ ಮಾಡಿ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದಾನೆ. ಆದರೆ ಸಾರ್ವಜನಿಕರು ಆರೋಪಿಯನ್ನು ಹಿಡಿದು ಥಳಿಸಿ, ಬಳಿಕ ಠಾಣೆಗೆ ಕರೆದೊಯ್ದಿದ್ದಾರೆ.
ಪೊಲೀಸರು ಕರ್ತವ್ಯಕ್ಕೆ ಅಡ್ಡಿ ಮಾಡಿದ ಆರೋಪದ ಮೇಲೆ ಮಹೇಶ ವಿರುದ್ಧ ದೂರು ದಾಖಲು ಮಾಡಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.