ಹುಬ್ಬಳ್ಳಿ : ಅರಣ್ಯ ಇಲಾಖೆಯಲ್ಲಿ ಇತ್ತೀಚೆಗೆ ನಡೆದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ. 117 ಹುದ್ದೆಗಳಿಗೆ ನಡೆದ ನೇಮಕಾತಿ ಪ್ರಕ್ರಿಯೆ ವೇಳೆ ಹಿರಿಯ ಅಧಿಕಾರಿಗಳು ಲಂಚ ಪಡೆದು ನೇಮಕಾತಿ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.
ಅಷ್ಟೇ ಅಲ್ಲ, ಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದು ನೇಮಕಾತಿ ಆದೇಶ ನೀಡಿರುವುದಾಗಿ ಆರೋಪಿಸಲಾಗಿದ್ದು, ಇದನ್ನು ಪ್ರಶ್ನಿಸಿ ಎಸಿಬಿಗೆ ದೂರು ನೀಡಲಾಗಿದೆ. ವಿವಿಧ ಹುದ್ದೆಗಳ ನೇಮಕಾತಿ ವೇಳೆ ಅರಣ್ಯ ಭವನದಲ್ಲಿ ಕೆಲಸ ಮಾಡುವ ಅಧಿಕಾರಿಗಳ ಪತ್ನಿಯ ಅಕೌಂಟ್ಗೆ ಫೋನ್ ಪೇ ಮೂಲಕ ಹಣ ಸಂದಾಯ ಮಾಡಲಾಗಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
ಅರಣ್ಯ ಭವನದಲ್ಲಿ ಕಾರ್ಯನಿರ್ವಹಿಸುವ ಎಫ್ಡಿಎ ಪ್ರಕಾಶ್, ಕೃಪಾನಿಧಿ, ವ್ಯವಸ್ಥಾಪಕ ಉಮಾಶಂಕರ್ ಅಭ್ಯರ್ಥಿಗಳಿಂದ ಹಣ ಪಡೆದು ನೇಮಕಾತಿ ಪ್ರಕ್ರಿಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮೆರಿಟ್ ಪ್ರಕಾರ ಅಭ್ಯರ್ಥಿಗಳನ್ನ ಆಯ್ಕೆ ಮಾಡದೇ ಲಂಚ ಪಡೆದು ನೇಮಕಾತಿ ಮಾಡಿದ್ದಾರೆ ಎಂದು ವಕೀಲ ಸುರೇಂದ್ರ ಎಂಬುವರು ಎಸಿಬಿಗೆ ದೂರು ಸಹ ಸಲ್ಲಿಸಿದ್ದಾರೆ. ಅರಣ್ಯ ಇಲಾಖೆಯಲ್ಲಿ ನಡೆದಿರುವ ಈ ನೇಮಕಾತಿ ಪ್ರಕ್ರಿಯೆ ವಿರುದ್ಧ ಸಚಿವ ಉಮೇಶ್ ಕತ್ತಿ ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ.
ಆದರೆ, ಲಂಚ ಪಡೆದು ಅಕ್ರಮ ಎಸಗಿರುವ ಅರಣ್ಯ ಇಲಾಖೆಯಲ್ಲಿನ ಹಿರಿಯ ಅಧಿಕಾರಿಗಳು ಸಾಕ್ಷಿ ನಾಶ ಮಾಡುವ ಮುನ್ನ ಎಸಿಬಿ ಅಧಿಕಾರಿಗಳು ತನಿಖೆ ನಡೆಸಲು ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.
ಓದಿ: ಸೈಕ್ಲಿಂಗ್ ಸ್ಪರ್ಧೆಯಲ್ಲೇ ಹೃದಯಾಘಾತ: ಹುಬ್ಬಳ್ಳಿಯ ಸೈಕ್ಲಿಸ್ಟ್ ವಿಧಿವಶ