ಹುಬ್ಬಳ್ಳಿ : ಧಾರವಾಡ ಜಿಲ್ಲೆಯ 2022ರ ಮುಂಗಾರು ಹಂಗಾಮಿನ ಅತಿವೃಷ್ಠಿಯಿಂದ ಬೆಳೆ ಹಾನಿಯಾಗಿದ್ದರೂ ಕೂಡಾ ಸೂಕ್ತ ಬೆಳೆ ವಿಮಾ ಪರಿಹಾರ ದೊರಕಿಲ್ಲ. ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಬೆಳೆ ವಿಮಾ ಶೇ 70 ರಿಂದ 80% ರಷ್ಟು ಮೊತ್ತ ಬಾರದೇ ರೈತರಿಗೆ ಅನ್ಯಾಯವಾಗಿದೆ ಎಂದು ಮಾಜಿ ಎಪಿಎಂಸಿ ಅಧ್ಯಕ್ಷ ಸುರೇಶ ಕಿರೇಸೂರ ಆರೋಪಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಬೆಳೆ ವಿಮೆ ಪರಿಹಾರ ಮಾತ್ರ ಕೇವಲ 15% ರಿಂದ 25% ರಷ್ಟು ಬಿಡುಗಡೆಯಾಗಿದೆ ಎಂದರು. ಹೆಚ್ಚು ಮಳೆಯಿಂದಾಗಿ ಸಂಪೂರ್ಣ ಬೆಳೆ ಹಾನಿಯಾಗಿದ್ದು, ನೆರೆ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿತ್ತು. ಅದರ ಪ್ರಕಾರ ಬೆಳೆ ಹಾನಿ ಪರಿಹಾರ ನೀಡಿದೆ. ಅಧಿಕಾರಿಗಳು ಬೆಳೆ ವಿಮಾ ಕಂಪನಿಗೆ ಕೇವಲ 15 % ರಿಂದ 25% ರಷ್ಟು ಹಾನಿಯಾಗಿದೆ ಎಂದು ವರದಿ ಕೊಟ್ಟಿರುವುದು ಇದಕ್ಕೆ ಕಾರಣ ಎಂದು ದೂರಿದ್ದಾರೆ.
70% ರಿಂದ 80% ರಷ್ಟು ಬೆಳೆ ವಿಮಾ ಪರಿಹಾರ ಒದಗಿಸಬೇಕು: ಕೇಂದ್ರ ಸಚಿವರು, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಧಾರವಾಡ ಜಿಲ್ಲಾ ಶಾಸಕರು ಒಂದುಗೂಡಿ ರೈತರಿಗೆ ಆದ ಮೋಸವನ್ನು ಸರಿಪಡಿಸಿ ನ್ಯಾಯ ಒದಗಿಸಬೇಕು. ಒಂದು ತಿಂಗಳಿನೊಳಗೆ ರೈತರಿಗೆ ಸಿಗಬೇಕಾದ ಸುಮಾರು 70% ರಿಂದ 80% ರಷ್ಟು ಬೆಳೆ ವಿಮಾ ಪರಿಹಾರವನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಇನ್ನು ಲಕ್ಷಾಂತರ ರೈತರು ತಮ್ಮ ಆರ್ಥಿಕ ಸಂಕಷ್ಟದ ನಡುವೆಯೂ ಹಣವನ್ನು ವಿಮಾ ಕಂಪನಿಗಳಿಗೆ ಕಟ್ಟಿರುತ್ತಾರೆ. ಆದರೆ ವಿಮೆಯ ಹಣ ಮಾತ್ರ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ತಲುಪುತ್ತಿದೆ. 2021ರಲ್ಲಿ ಮಳೆ ಪ್ರಮಾಣ 477.10 ಮಿ.ಮೀ ಬಿದ್ದಾಗ 70-80% ಪರಿಹಾರ ಬಂದಿದೆ. ಆದರೆ 2022ರಲ್ಲಿ 569.4 ಮಿ. ಮೀ ಮಳೆಯಾಗಿದ್ದು, ಕೇವಲ 15% ರಷ್ಟು ವಿಮೆ ಹಣ ಬಿಡುಗಡೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದರು.
ಅನ್ನದಾತನ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯವನ್ನು ಮಾಡಬೇಕು: ಸೂಕ್ತ ಪರಿಹಾರ ಬಾರದಿರುವುದಕ್ಕೆ ಕಾರಣವಾಗಿರುವವರ ವಿರುದ್ಧ ಸರ್ಕಾರ ಕಾನೂನು ರೀತಿಯಲ್ಲಿ ಕ್ರಮಗಳನ್ನು ಜರುಗಿಸುವ ಮೂಲಕ ಅನ್ನದಾತನ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯವನ್ನು ಮಾಡಬೇಕು ಎಂದು ರೈತರು ಒತ್ತಾಯಿಸಿದರು.
ಅಧಿಕಾರಿ ಸ್ಪಷ್ಟನೆ.. 'ಕಳೆದ ವರ್ಷದ ಫಸಲ್ ಭೀಮಾ ಯೋಜನೆಯಲ್ಲಿ ಯಾವುದೇ ಗೋಲ್ಮಾಲ್ ಆಗಿಲ್ಲ. ಕಳೆದ ಐದು ವರ್ಷದ ಬೆಳೆಯ ಇಳುವರಿಯಲ್ಲಿ ಅರ್ಧಕ್ಕಿಂತ ಕಡಿಮೆ ಇಳುವರಿ ಬಂದ್ರೆ ಮಾತ್ರ ಬೆಳೆ ವಿಮೆ ಬರುತ್ತದೆ. ಆದ್ರೆ ಕಳೆದ ವರ್ಷ ಸರಾಸರಿ ಇಳುವರಿ ಬಂದ ಕಾರಣ ವಿಮೆ ಜಮಾ ಆಗಿಲ್ಲ. ಇದು ಸಹಜ ಪ್ರಕ್ರಿಯೆ. ಇದರಲ್ಲಿ ಇಲಾಖೆಯ ಹಸ್ತಕ್ಷೇಪ ಇರುವುದಿಲ್ಲ' ಎಂದು ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅನಗೌಡರ ಅವರು ಈಟಿವಿ ಭಾರತ್ಗೆ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆ ದುರುಪಯೋಗ : ಧಾರವಾಡದಲ್ಲಿ 9 ಜನರ ವಿರುದ್ಧ ದೂರು