ಧಾರವಾಡ: ವಕೀಲರ ಸಂಘದ ಸದಸ್ಯ ಸುನೀಲ ಗುಡಿ ಅವರ ಮೇಲೆ ಪೊಲೀಸರು ಹಲ್ಲೆಗೆ ಮುಂದಾಗಿದ್ದರೆಂದು ಆರೋಪಿಸಿ ಧಾರವಾಡ ಬಾರ್ ಅಸೋಸಿಯೇಷನ್ ವತಿಯಿಂದ ವಕೀಲರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ನ್ಯಾಯಾಲಯದ ಕಾರ್ಯಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ವಕೀಲರು, ಹಲ್ಲೆ ಮಾಡಲು ಮುಂದಾದ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನಿನ್ನೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಗೆ ಪಕ್ಷಗಾರರ ಪರವಾಗಿ ಚರ್ಚಿಸಲು ಹೋದ ಸಂದರ್ಭದಲ್ಲಿ ಗ್ರಾಮೀಣ ಠಾಣೆ ಪೊಲೀಸರು ವಾಗ್ವಾದ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಠಾಣೆಯಿಂದ ಬಟ್ಟೆ ಹಿಡಿದು ಹೊರ ದೂಡಿದ್ದಾರೆ ಎಂದು ಪ್ರತಿಭಟನಾನಿರತ ವಕೀಲರು ಆರೋಪಿಸಿದ್ದಾರೆ.
ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಅನುಚಿತವಾಗಿ ವರ್ತನೆ ಮಾಡಿದ್ದಾರೆ. ಗ್ರಾಮೀಣ ಠಾಣೆ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.