ಹುಬ್ಬಳ್ಳಿ : 'ಹುಬ್ಬಳ್ಳಿ ಮತ್ತು ಧಾರವಾಡ ಮಹಾನಗರ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯಾಗಿ ರೂಪಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ನೂತನ ಪೊಲೀಸ್ ಆಯುಕ್ತ ರಮಣ್ ಗುಪ್ತಾ ತಿಳಿಸಿದ್ದಾರೆ. ಗುರುವಾರ ನವನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈಗಾಗಲೇ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಪೊಲೀಸ್ ಇಲಾಖೆಯಿಂದ ಉತ್ತಮ ಕೆಲಸಗಳು ನಡೆಯುತ್ತಿವೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲಾಗುವುದು' ಎಂದರು.
'ಅಪರಾಧ ಮತ್ತು ಟ್ರಾಫಿಕ್ ವಿಷಯಕ್ಕೆ ಸಂಬಂಧಿಸಿದಂತೆ ಆಧುನಿಕ ತಂತ್ರಜ್ಞಾನ ಬಳಸಿ ತನಿಖೆಯ ವೇಗ ಹೆಚ್ಚಿಸಲಾಗುವುದು. ಪೆಟ್ರೋಲಿಂಗ್ ಮತ್ತು ಬೀಟ್ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಲು ಪ್ರಯತ್ನಿಸಲಾಗುವುದು. ಕಳೆದ ವರ್ಷ 959 ಪ್ರಕರಣಗಳಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ. ರೌಡಿಶೀಟರ್‌ಗಳನ್ನು ಬಂಧಿಸಿ ಬಿಸಿ ಮುಟ್ಟಿಸಲಾಗಿದೆ' ಎಂದು ಹೇಳಿದರು.
'ನಮ್ಮ ಪ್ರತಿ ಪೊಲೀಸ್ ಠಾಣೆಗಳಿಗೆ ಬರುವಂತಹ ಜನಸಾಮಾನ್ಯರಿಗೆ ಅದೇ ಸಮಯದಲ್ಲಿ ನಾವು ಏನು ಸಹಾಯ ಮಾಡಬೇಕೋ, ತಕ್ಷಣ ಸ್ಪಂದನೆ ನೀಡಬೇಕು ಎಂಬ ವ್ಯವಸ್ಥೆಯನ್ನು ಚುರುಕಾಗಿ ಮಾಡುತ್ತೇವೆ. ಹೊಯ್ಸಳ ಗಸ್ತು ವಾಹನಗಳು ಒಳ್ಳೆಯ ಕೆಲಸಗಳನ್ನು ನಿರ್ವಹಿಸುತ್ತಿವೆ. ಸಾರ್ವಜನಿಕರಿಗೆ ಉಪಯೋಗವಾಗುವಂತೆ ಇನ್ನೂ ಹೆಚ್ಚು ಗಸ್ತು ವಾಹನಗಳಿಗೆ ತರಬೇತಿ ನೀಡಲಾಗುವುದು' ಎಂದರು.
ಇದನ್ನೂ ಓದಿ: ಹುಬ್ಬಳ್ಳಿಗೆ ಬರಲಿದೆ ವಂದೇ ಭಾರತ್ ರೈಲು: ಯಾವಾಗ ಗೊತ್ತೇ?
'ಗಾಂಜಾ, ಅಫೀಮು ಸೇರಿದಂತೆ ಮಾದಕ ವಸ್ತುಗಳ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು. ಸೈಬರ್ ಕ್ರೈಂ, ಅಪರಾಧ ಚಟುವಟಿಕೆಗಳಲ್ಲಿ ಯುವ ಸಮುದಾಯ, ವಿದ್ಯಾರ್ಥಿಗಳು ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಜಾಗೃತಿ ಕಾರ್ಯಕ್ರಮ ಮಾಡಲಾಗುವುದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ರೀತಿಯಲ್ಲಿ ಯಾರಾದರೂ ವರ್ತಿಸಿದರೆ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಪೊಲೀಸ್ ಆಯುಕ್ತ ರಮಣ್ ಗುಪ್ತ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೂ ಮುನ್ನ ಹು-ಧಾ ಮಹಾನಗರದ ಪೊಲೀಸ್ ಆಯುಕ್ತರಾಗಿದ್ದ ಲಾಬೂರಾಮ್ ಅವರಿಗೆ ಬಡ್ತಿ ನೀಡಿ ಐಜಿಪಿ ಇಂಟಲಿಜೆನ್ಸ್ ವಿಭಾಗಕ್ಕೆ ವರ್ಗಾವಣೆ ಮಾಡಿದ ಬೆನ್ನಲ್ಲೇ ಆ ಸ್ಥಾನಕ್ಕೆ ಪೊಲೀಸ್ ಆಯುಕ್ತರನ್ನಾಗಿ ರಮಣ್ ಗುಪ್ತಾ ನಿಯೋಜನೆಗೊಂಡಿದ್ದಾರೆ. ಮೂರು ದಿನಗಳ ಹಿಂದೆ ಇವರು ಆಯುಕ್ತರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದರು. ಲಾಬೂರಾಮ್ ಅವರು ಅಧಿಕಾರ ಹಸ್ತಾಂತರಿಸಿ ನೂತನ ಕಮಿಷನರ್‌ಗೆ ಅಭಿನಂದನೆ ಸಲ್ಲಿಸಿದ್ದರು.
ಇದನ್ನೂ ಓದಿ: ಹುಬ್ಬಳ್ಳಿ - ಧಾರವಾಡ ಪೊಲೀಸ್ ಆಯುಕ್ತರಾಗಿ ರಮಣ್ ಗುಪ್ತಾ ನಿಯೋಜನೆ: ಲಾಬೂರಾಮ್ ವರ್ಗಾವಣೆ