ಧಾರವಾಡ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜು.11ವರೆಗೆ ಜಿಲ್ಲೆಯ ವಿವಿಧ ಪಟ್ಟಣ ಮತ್ತು ಗ್ರಾಮಗಳ ಸುಮಾರು 157 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಎನ್ಡಿಆರ್ಎಫ್ ನಿಯಮಾವಳಿ ಅನ್ವಯ ತಕ್ಷಣ ಪರಿಹಾರ ಬಿಡುಗಡೆ ಮಾಡಲು ಕ್ರಮ ವಹಿಸಬೇಕು ಮತ್ತು ಜನರ ಸುರಕ್ಷತೆಗಾಗಿ ಜಿಲ್ಲಾಡಳಿತ ನಿರಂತರವಾಗಿ ನಿಗಾವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆಚಾರ್ ಹಾಲಪ್ಪ ಸೂಚಿಸಿದ್ದಾರೆ.
ಈ ಕುರಿತು ಧಾರವಾಡ ಜಿಲ್ಲಾಡಳಿಕ್ಕೆ ನಿರ್ದೇಶನ ನೀಡಿರುವ ಅವರು, ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದ 157 ಮನೆಗಳು ಭಾಗಶಃ ಹಾನಿಯಾಗಿದ್ದು, ಪರಿಹಾರ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿರುವ ಅಳ್ನಾವರ ತಾಲೂಕಿನ ಇಂದ್ರಮ್ಮನ ಕೆರೆ ಹಾಗೂ ನವಲಗುಂದ ತಾಲೂಕಿನ ಬೆಣ್ಣಿಹಳ್ಳ, ತುಪ್ಪರಿಹಳ್ಳಗಳು ಅಪಾಯ ಮಟ್ಟದಲ್ಲಿ ಇಲ್ಲ. ಬಿತ್ತನೆಯ ಬೀಜ, ಗೊಬ್ಬರ ಶೇಖರಣೆ ಹಾಗೂ ವಿತರಣೆ ಸರಿಯಾಗಿ ಆಗಬೇಕು ಎಂದರು.
ಹಳ್ಳ-ಕೊಳ್ಳಗಳು ಸೇರಿದಂತೆ ವಿವಿಧ ಜಲ ಮೂಲಗಳಿಂದ ಹಾನಿಯಾಗಬಹುದಾದ ಸ್ಥಳದಿಂದ ಜನರನ್ನು ಕೂಡಲೇ ಸ್ಥಳಾಂತರಗೊಳಿಸಬೇಕು. ಕಾಳಜಿ ಕೇಂದ್ರ ತೆರೆಯಲು ಸಮುದಾಯ ಭವನ ಹಾಗೂ ಕಲ್ಯಾಣ ಮಂಟಪಗಳನ್ನು ಗುರುತಿಸಿ ಈಗಾಗಲೇ ನೇಮಿಸಲಾದ ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳಿಗೆ ತಹಶೀಲ್ದಾರರೊಂದಿಗೆ ಸಮನ್ವಯ ಸಾಧಿಸುವಂತೆ ಉಸ್ತುವಾರಿ ಸಚಿವರು ತಿಳಿಸಿದ್ದಾರೆ.
ಮಳೆ ಪ್ರಮಾಣ ಹೀಗಿದೆ..: ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಈವರೆಗೂ 52.8 ಮಿ.ಮೀ ವಾಡಿಕೆ ಮಳೆಗೆ 78.5 ಮಿ.ಮೀ ಮಳೆಯಾಗಿದೆ. ಜೂನ್ ತಿಂಗಳಲ್ಲಿ 125 ಮಿ.ಮೀ ವಾಡಿಕೆ ಮಳೆಗೆ 94 ಮಿ.ಮೀ ಮಳೆಯಾಗಿದೆ. ಮುಂದಿನ 3 ದಿನಗಳವರೆಗೆ 15.5 ಮಿ.ಮೀನಿಂದ 14.4 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆಯಿದೆ.
ಬಿತ್ತನೆ: ಮುಂಗಾರು ಹಂಗಾಮಿಗೆ 2,73.02 ಹೆಕ್ಟೇರ್ ಪದೇಶದಲ್ಲಿ ಕೃಷಿ ಬೆಳೆಗಳ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ. ಈವರೆಗೆ 261,238 ಹೆಕ್ಟೇರ್ ಪ್ರದೇಶದಲ್ಲಿ ಶೇ.95 ರಷ್ಟು ವಿವಿಧ ಕೃಷಿ ಬೆಳೆಗಳ ಬಿತ್ತನೆಯಾಗಿದೆ.
ಬಿತ್ತನೆ ಬೀಜ ವಿತರಣೆ: ಮುಂಗಾರು ಹಂಗಾಮಿನಲ್ಲಿ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಿಸಲು ರೈತ ಸಂಪರ್ಕ ಕೇಂದ್ರ ಹಾಗೂ 14 ಹೆಚ್ಚುವರಿ ಮಾರಾಟ ಕೇಂದ್ರಗಳನ್ನು ತೆರೆಯಲಾಗಿದೆ. ಈವರೆಗೆ 22,350 ಕ್ವಿಂಟಾಲ್ ನಷ್ಟು ಬಿತ್ತನೆ ಬೀಜ ಸಂಗ್ರಹಿಸಿ, 15,945 ಕ್ವಿಂಟಲ್ ವಿತರಣೆ ಮಾಡಲಾಗಿದೆ.
ರಸಗೊಬ್ಬರ: ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಈವರೆಗೆ 17,025 ಮೆ.ಟನ್ ಯೂರಿಯಾ, 13,494 ಮೆ.ಟನ್ ಡಿಎಪಿ ಹಾಗೂ 7,735 ಮೆ.ಟನ್ ಕಾಂಪ್ಲೆಕ್ಸ್ ಗೊಬ್ಬರ ಮತ್ತು ಇತರೆ ಗೊಬ್ಬರ ಸೇರಿ ಒಟ್ಟು 38,254 ಮೆ.ಟನ್ ರಸಗೊಬ್ಬರ ಮಾರಾಟವಾಗಿದೆ.
ಸದ್ಯ ಜಿಲ್ಲೆಯಲ್ಲಿ 4.029 ಮೆ.ಟನ್ ಯೂರಿಯಾ, 1.396 ಮೆ.ಟನ್ ಡಿಎಪಿ, 827 ಮೆ.ಟನ್ ಎಂಒಪಿ., 3,181 ಮೆ.ಟನ್ ಕಾಂಪ್ಲೆಕ್ಸ್ ಹಾಗೂ 238 ಮೆ.ಟನ್ ಎಸ್ಎಸ್ಪಿ ರಸಗೊಬ್ಬರ ಸೇರಿದಂತೆ 9,672 ಮೆ.ಟನ್ ರಸಗೊಬ್ಬರ ಲಭ್ಯವಿದೆ. ರೈತರ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಕೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಬೆಳೆ ವಿಮೆ: ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ನೋಂದಾಯಿಸಲು ಎಲ್ಲಾ ಬೆಳೆಗಳಿಗೆ ಜು.31 ಕೊನೆಯ ದಿನಾಂಕವಾಗಿದೆ. ಕೆಂಪು ಮೆಣಸಿನಕಾಯಿ (ಮಳೆಯಾಶ್ರಿತ ಮತ್ತು ನೀರಾವರಿ) ಬೆಳೆಗೆ ಆ.10 ಅಂತಿಮ ದಿನಾಂಕವಾಗಿರುತ್ತದೆ.
ಇದನ್ನೂ ಓದಿ: ಕರಾವಳಿಯ ಮಳೆ ಹಾನಿ ಪ್ರದೇಶಗಳಿಂದು ಸಿಎಂ ಬೊಮ್ಮಾಯಿ ಭೇಟಿ