ಹುಬ್ಬಳ್ಳಿ: ಆಗಸ್ಟ್ 2022 ರಲ್ಲಿ ನೈಋತ್ಯ ರೈಲ್ವೆಯು ಪ್ರಯಾಣಿಕ ರೈಲು ಸಂಚಾರದಿಂದ 227.10 ಕೋಟಿ ರೂ. ಆದಾಯ ಗಳಿಸಿದ್ದು ಇದು ಸಾರ್ವಕಾಲಿಕ ದಾಖಲೆಯಾಗಿದೆ. ಏಪ್ರಿಲ್ 2022 ರಿಂದ ಆಗಸ್ಟ್ 2022ರ ಅವಧಿಯಲ್ಲಿ ನೈಋತ್ಯ ರೈಲ್ವೆ 50 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಿದೆ.
2021-22ರ ಅವಧಿಯಲ್ಲಿ ಗಳಿಸಿದ ಆದಾಯಕ್ಕೆ ಹೋಲಿಸಿದರೆ (450.72 ಕೋಟಿ ರೂ), ನೈಋತ್ಯ ರೈಲ್ವೆ ಪ್ರಸ್ತುತ ಹಣಕಾಸು ವರ್ಷದಲ್ಲಿ ಆಗಸ್ಟ್ 2022 ರವರೆಗಿನ ಪ್ರಯಾಣಿಕ ರೈಲು ಸಂಚಾರದಿಂದ 1084.89 ಕೋಟಿ ರೂ ಆದಾಯ ಗಳಿಸಿದೆ. ಇದು 140.70% ರಷ್ಟು ಹೆಚ್ಚಳವಾಗಿದೆ.
ಆಗಸ್ಟ್ 2022 ರಲ್ಲಿ 12.21 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಿದ್ದು, ಆಗಸ್ಟ್ 2021ಕ್ಕೆ ಹೋಲಿಸಿದಲ್ಲಿ (5.83 ಮಿಲಿಯನ್) ಆಗಿದ್ದು ಇದು ಗಣನೀಯ ಏರಿಕೆಯಾಗಿದೆ. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ 58.31 ಮಿಲಿಯನ್ ಪ್ರಯಾಣಿಕರನ್ನು ಸಾಗಿಸುವ ಪ್ರಮುಖ ಮೈಲಿಗಲ್ಲು ಸಾಧಿಸಲು ಕಾರಣವಾಗಿದೆ.
ಪ್ರಯಾಣಿಕರ ಬೇಡಿಕೆಗಳನ್ನು ಪೂರೈಸಲು ಆಗಸ್ಟ್ ತಿಂಗಳಲ್ಲಿ 23 ವಿಶೇಷ ರೈಲು ಸೇವೆಗಳನ್ನು ವಿವಿಧ ಗಮ್ಯಸ್ಥಾನಗಳಿಗೆ ಸಂಚರಿಸಲಾಗಿದೆ. ಇದಲ್ಲದೇ, ಪ್ರಯಾಣಿಸುವ ಸಾರ್ವಜನಿಕರ ಬೇಡಿಕೆಗಳನ್ನು ಪೂರೈಸಲು ಮತ್ತು ಆದಾಯವನ್ನು ಹೆಚ್ಚಿಸಲು, ಹಬ್ಬದ ಋತುವಿನಲ್ಲಿ ವಿವಿಧ ಸ್ಥಳಗಳಿಗೆ ವಿಶೇಷ ರೈಲುಗಳನ್ನು ಸಂಚರಿಸಲು ಸಹ ಪ್ರಸ್ತಾಪಿಸಲಾಗಿದೆ. ಹಬ್ಬ, ರಜೆ ಅವಧಿಯಲ್ಲಿ ಹೆಚ್ಚಿನ ಪ್ರಯಾಣದ ದಟ್ಟಣೆ ತೆರವುಗೊಳಿಸಲು ಹೆಚ್ಚುವರಿ ಬೋಗಿಗಳನ್ನು ಅಳವಡಿಸಲು ಯೋಜಿಸಲಾಗುತ್ತಿದೆ.
ಕೋವಿಡ್-ಪೂರ್ವ ಅವಧಿಗೆ ಹೋಲಿಸಿದರೆ ನೈಋತ್ಯ ರೈಲ್ವೆಯು ಶೇ.99ಕ್ಕಿಂತ ಹೆಚ್ಚು ರೈಲು ಸೇವೆಗಳನ್ನು ಪುನರಾರಂಭಿಸಲಾಗಿದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಡೀಸೆಲ್ ಉಳಿತಾಯದಲ್ಲಿ ನೈಋತ್ಯ ರೈಲ್ವೆ ದಾಖಲೆ : ಪರಿಸರಕ್ಕೆ ಪೂರಕವಾದ ಚಿಂತನೆ