ಧಾರವಾಡ: ಟೆಂಪೋ ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ 11 ಮೃತಪಟ್ಟ ಘಟನೆ ಧಾರವಾಡದಲ್ಲಿ ಸಂಭವಿಸಿದೆ. ಅಪಘಾತದಲ್ಲಿ 9 ಜನ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಧಾರವಾಡ ಹೊರವಲಯದ ಇಟಿಗಟ್ಟಿ ಗ್ರಾಮದ ಬೈಪಾಸ್ ಬಳಿ ಈ ದುರ್ಘಟನೆ ನಡೆದಿದೆ. ಟೆಂಪೋದಲ್ಲಿದ್ದ 18 ಜನರ ಪೈಕಿ 10 ಮಂದಿ ಸಾವನ್ನಪ್ಪಿದ್ದು, 8 ಜನರು ಗಾಯಗೊಂಡಿದ್ದಾರೆ. ಟೆಂಪೋದಲ್ಲಿದ್ದವರು ದಾವಣಗೆರೆಯ ವಿದ್ಯಾನಗರ, ಎಂಸಿಸಿ ಎ ಬ್ಲಾಕ್ ಮತ್ತು ಎಂಸಿಸಿ ಬಿ ಬ್ಲಾಕ್ ನಿವಾಸಿಗಳು. ಇವರೆಲ್ಲರೂ ಗೋವಾದ ಪಣಜಿಗೆ ಪ್ರವಾಸ ಕೈಗೊಂಡಿದ್ದರು. ಇವರಲ್ಲಿ ಹೆಚ್ಚಿನವರು ವೈದ್ಯರು ಎನ್ನಲಾಗಿದ್ದು, ಮಾಜಿ ಶಾಸಕ ಗುರುಸಿದ್ದನಗೌಡರ ಸೊಸೆ, ಆರೈಕೆ ಆಸ್ಪತ್ರೆ ಡಾ.ರವಿಕುಮಾರ್ ಪತ್ನಿ ಪ್ರೀತಿ ರವಿಕುಮಾರ್, ಸ್ತ್ರೀರೋಗ ತಜ್ಞೆ ಡಾ.ವೀಣಾ ಪ್ರಕಾಶ್ ಸೇರಿ ಹಲವರು ಪಣಜಿಗೆ ಹೊರಟಿದ್ದರು ಎಂದು ತಿಳಿದುಬಂದಿದೆ. ಅಪಘಾತದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ದಾವಣಗೆರೆ ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.
ಘಟನೆಯಲ್ಲಿ ಟಿಪ್ಪರ್ನಲ್ಲಿದ್ದ ಇಬ್ಬರಲ್ಲಿ ಓರ್ವ ಸಾವಿಗೀಡಾಗಿದ್ದಾನೆ. ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಲಾಗಿದೆ. ಸ್ಥಳಕ್ಕೆ ಧಾರವಾಡ ಎಸ್ಪಿ ಕೃಷ್ಣಕಾಂತ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.