ಧಾರವಾಡ: ನೀರಾವರಿ ಇಲಾಖೆಯ ಸ್ಥಳಾಂತರ ವಿರೋಧಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ಕರ್ನಾಟಕ ಜಲಸಂಪನ್ಮೂಲ ಇಲಾಖೆಯ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಧಾರವಾಡ ವಿಭಾಗೀಯ ಕಚೇರಿಯನ್ನು ಬೆಳಗಾವಿಗೆ ಸ್ಥಳಾಂತರ ಮಾಡುವ ನಿರ್ಧಾರ ರದ್ದುಪಡಿಸಬೇಕು ಎಂದು ಸಚಿವ ಜಗದೀಶ ಶೆಟ್ಟರ್ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
30-06-2020ರ ರಾಜ್ಯ ಸರ್ಕಾರದ ಅಧಿಸೂಚನೆಯ ಅನುಸಾರ ಧಾರವಾಡ ನೀರಾವರಿ ನಿಗಮದ ಕಚೇರಿಯನ್ನು ಬೆಳಗಾವಿಗೆ ಸ್ಥಳಾಂತರವಾಗುತ್ತಿರುವುದು ಉತ್ತರ ಕರ್ನಾಟಕದ ಪ್ರಾದೇಶಿಕ ಭಾಗದ ಜಿಲ್ಲೆಗಳಲ್ಲಿ ಒಡಕನ್ನುಂಟು ಮಾಡುವ ನಡೆಯಾಗಿದೆ ಎಂದು ದೂರಿದರು. ಈ ಕುರಿತು ಸ್ಥಳೀಯ ಶಾಸಕರು, ಸಚಿವರು ಗಮನ ಹರಿಸಿ ಧಾರವಾಡದಲ್ಲಿಯೇ ಕಚೇರಿಯನ್ನು ಮುಂದುವರೆಸುವಂತೆ ಆಗ್ರಹಿಸಿದರು.