ಧಾರವಾಡ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ, ಎನ್ಆರ್ಸಿ, ಎನ್‌ಪಿಆರ್ ಬೆಂಬಲಿಸಿ ಧಾರವಾಡದ ದೇಶಭಕ್ತ ನಾಗರಿಕರ ವೇದಿಕೆ ವತಿಯಿಂದ ಕಡಪಾ ಮೈದಾನದಲ್ಲಿ ಫೆ.8 ರಂದು ಸಂಜೆ 4:30ಕ್ಕೆ ಸಾರ್ವಜನಿಕ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದು ಶ್ರೀರಾಮಸೇನಾ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.
ಧಾರವಾಡದ ಸರ್ಕಿಟ್ ಹೌಸ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಿನ ಬಹಿರಂಗ ಸಭೆಗೆ ಚುತ್ರದುರ್ಗದ ಪ.ಪೂ ಮಾದರ ಚನ್ನಯ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅನ್ವರ ಮಾನಪಾಡಿ, ಆರ್.ಎಸ್.ಎಸ್. ಪ್ರಮುಖ ಶ್ರೀಧರ ನಾಡಗೇರ, ಶ್ರೀರಾಮಸೇನಾ ಅಧ್ಯಕ್ಷ ಪ್ರಮೋದ ಮುತಾಲಿಕ, ವಿ.ಹೆಚ್.ಪಿ ಮುಖಂಡ ಗೋವರ್ಧನ ಜೀ, ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ ಭಾಗವಹಿಸಲಿದ್ದಾರೆ ಎಂದರು.
ಅಂದು ಬಹಿರಂಗ ಸಭೆಗೆ ಮುಂಚೆ ಮಧ್ಯಾಹ್ನ 3ಕ್ಕೆ ಧಾರವಾಡದ ಕಡಪಾ ಮೈದಾನದಿಂದ ತಿರಂಗಾ ಯಾತ್ರೆ ಕೈಗೊಳ್ಳಲಾಗುವುದು. ಅಂದಿನ ಸಭೆಗೆ 10 ಸಾವಿರ ಜನ ಸೇರುವ ನಿರೀಕ್ಷೆಯಿದೆ. ಧಾರವಾಡ, ಧಾರವಾಡ ಗ್ರಾಮಾಂತರ, ಹುಬ್ಬಳ್ಳಿಯಿಂದ ಜನರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.