ಹುಬ್ಬಳ್ಳಿ: ಅಕ್ರಮವಾಗಿ ಜಿಲೆಟಿನ್ ಕಡ್ಡಿ ಹಾಗೂ ಇತರ ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ಓರ್ವನನ್ನು ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಚವರಗುಡ್ಡ ಗ್ರಾಮದಲ್ಲಿರುವ ಮೋಹನ ವೆಂಕಣ್ಣ ಗಿರಡ್ಡಿ ಎಂಬುವರಿಗೆ ಸೇರಿದ ಬಾಲಾಜಿ ಸ್ಟೋನ್ ಮತ್ತು ಕ್ರಷರ್ ಕ್ವಾರಿಗೆ ಬೈಕ್ ಮೂಲಕ ಅಕ್ರಮವಾಗಿ ಜಿಲೆಟಿನ್ ಕಡ್ಡಿ, ಸ್ಫೋಟಕ ವಸ್ತುಗಳನ್ನು ವ್ಯಕ್ತಿಯೋರ್ವ ಹುಬ್ಬಳ್ಳಿ ಕಡೆಯಿಂದ ಸಾಗಿಸುತ್ತಿರುವ ಬಗ್ಗೆ ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗಕ್ಕೆ ಡಿಸೆಂಬರ್ 24ರಂದು ಖಚಿತ ಮಾಹಿತಿ ದೊರೆಕಿತ್ತು.
ಮಾಹಿತಿ ಸಿಕ್ಕ ಕೂಡಲೇ ಆಂತರಿಕ ಭದ್ರತಾ ವಿಭಾಗದ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿ ಪತ್ತೆ ಮಾಡಲು ಕಾರ್ಯಾಚರಣೆ ಕೈಗೊಂಡರು. ಆರೋಪಿ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿಯ ಹನುಮಂತಗೌಡ ವೀರನಗೌಡ ಪಾಟೀಲ ಹಾಗೂ ಆತನ ಬಳಿಯಿದ್ದ 41 ಜಿಲೆಟಿನ್ ಕಡ್ಡಿಗಳು, 23 ಇಲೆಕ್ಟ್ರಾನಿಕ್ ಡಿವೈಸ್‍ಗಳು, ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.
ಘಟನೆ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸ್ಫೋಟಕ ಕಾಯ್ದೆ 1884ರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ:ಕುಸಿದ ಮಣ್ಣಿನ ದಿಬ್ಬ, ಕೂದಲೆಳೆ ಅಂತರದಲ್ಲಿ ಪಾರಾದ ಜಗದೀಶ್ ಶೆಟ್ಟರ್