ಹುಬ್ಬಳ್ಳಿ : ಪೊಲೀಸ್ ಅರ್ಹತಾ ಪರೀಕ್ಷೆಗೆ ಬೇರೆ ಅಭ್ಯರ್ಥಿಯ ಹೆಸರಿನಲ್ಲಿ ಪರೀಕ್ಷೆ ಬರೆಯಲು ಹೋಗಿದ್ದ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬನನ್ನು ಗೋಕುಲ್ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಗೋಕುಲ್ ರಸ್ತೆಯ ಕೆಎಲ್ಇ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬೆಳಗಾವಿ ಜಿಲ್ಲೆಯ ಮಣಿಕಂಠ ಎಂಬಾತ ಬೇರೆ ಅಭ್ಯರ್ಥಿ ಹೆಸರಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದ. ಈತನ ದಾಖಾಲಾತಿಗಳನ್ನು ಪರೀಕ್ಷೆ ಮಾಡಿದಾಗ ಈತ ಬೆಳಗಾವಿಯ ಪೊಲೀಸ್ ಕಾನ್‌ಸ್ಟೇಬಲ್ ಎಂದು ತಿಳಿದು ಬಂದಿದೆ.
ಈತ ರಾಯಭಾಗ ಮೂಲದ ಅಭ್ಯರ್ಥಿಯ ಹೆಸರಿನಲ್ಲಿ ಪರೀಕ್ಷೆ ಬರೆಯುವ ವೇಳೆ ಈತನ ಅಸಲಿ ಬಣ್ಣ ಬಯಲಾಗಿದೆ. ಅವಳಿ ನಗರದ ಡಿಸಿಪಿಕೆ ರಾಮರಾಜನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ನಕಲಿ ಅಭ್ಯರ್ಥಿಯನ್ನು ವಶಕ್ಕೆ ಪಡೆದ ಗೋಕುಲ್ ರೋಡ್ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.