ಹುಬ್ಬಳ್ಳಿ : ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಆಯುಷ್ ವೈದ್ಯನೊಬ್ಬ ರೀಲ್ ಮಾಡಿದ ವಿಡಿಯೋ ವೈರಲ್ ಆಗಿದೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾಕ್ಟರ್ ಒಬ್ಬರು ರೀಲ್ ಮಾಡಲು ಹೋಗಿ ವೈರಲ್ ಆಗಿದ್ದಾರೆ.
ಆಸ್ಪತ್ರೆಯಲ್ಲೇ ಡಾಕ್ಟರ್ ಹಾಗೂ ಸಿಬ್ಬಂದಿ ಪತಲಿ ಕಮರಿಯಾ ಎಂಬ ಹಿಂದಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿ ಕುಣಿದು ಕುಪ್ಪಳಿಸಿದ್ದಾರೆ. ವೈದ್ಯನ ಭರ್ಜರಿ ಕುಣಿತಕ್ಕೆ ಆಸ್ಪತ್ರೆ ಸಿಬ್ಬಂದಿ ಹಾಳೆ ಹರಿದು ಚೆಲ್ಲಿ ಸಂಭ್ರಮಿಸಿದ್ದಾರೆ. ಕರ್ತವ್ಯದ ವೇಳೆ ಸಿಬ್ಬಂದಿ ಜತೆಗೆ ವೈದ್ಯ ಡ್ಯಾನ್ಸ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ವಿನಾಯಕ ಅವರ ನಡೆಗೆ ಸಾರ್ವಜನಿಕರಿಂದ ಖಂಡನೆ: ಕರ್ತವ್ಯ ಪ್ರಜ್ಞೆ ಮರೆತ ವೈದ ಹಾಗೂ ಸಿಬ್ಬಂದಿಯ ನಡೆಗೆ ಸಾರ್ವಜನಿಕರಿಂದ ಖಂಡನೆ ವ್ಯಕ್ತಪಡಿಸಿದ್ದಾರೆ. ವೈದ್ಯ ಕಳಸಣ್ಣವರಿಗೆ ತಾಲೂಕು ವೈದ್ಯಾಧಿಕಾರಿ ನೋಟಿಸ್ ಜಾರಿ ಮಾಡಿದ್ದು, ಸ್ಪಷ್ಟನೆ ಕೇಳಿದ್ದಾರೆ. ಡಾ ಕಳಸಣ್ಣವರ್ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಉಪಾಧ್ಯಕ್ಷರೂ ಆಗಿದ್ದಾರೆ ಎಂಬುದು ತಿಳಿದು ಬಂದಿದೆ.
ವಿಧಾನಸೌಧದ ಒಳಗೆ ಸಾಗಿಸುತ್ತಿದ್ದಾಗ ವ್ಯಕ್ತಿಯ ಕೈಯಿಂದ ಜಾರಿದ ಮದ್ಯದ ಬಾಟಲಿ (ಬೆಂಗಳೂರು ): ಇನ್ನೊಂದೆಡೆ ಮದ್ಯ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಕೈಯಿಂದ ಅಚಾನಕ್ ಆಗಿ ಮದ್ಯದ ಬಾಟಲಿ ಕೈ ಜಾರಿ ಕೆಳಗೆ ಬಿದ್ದು ಒಡೆದಿರುವ ಘಟನೆ ನಿನ್ನೆ (ಮಂಗಳವಾರ) ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ನಡೆದಿತ್ತು. ಇದು ಸಹ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ವಿಧಾನಸೌಧದ ದ್ವಾರದಲ್ಲಿ ಎಣ್ಣೆ ಬಾಟಲ್ಗಳು ಪತ್ತೆ: ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಧ್ಯೇಯವಾಕ್ಯ ಹೊಂದಿರುವ ಶಕ್ತಿಸೌಧದಲ್ಲಿ ಮದ್ಯದ ಬಾಟಲಿ ಪತ್ತೆಯಾಗಿರುವುದೇ ಇರುಸು ಮುರುಸಿಗೆ ಕಾರಣವಾಗಿದೆ. ಕೆಲ ದಿನಗಳ ಹಿಂದೆ ವಿಧಾನಸೌಧದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಹಣ ಪತ್ತೆಯಾಗಿತ್ತು. ಈಗ ವಿಧಾನಸೌಧದ ದ್ವಾರದಲ್ಲಿ ಎಣ್ಣೆ ಬಾಟಲ್ಗಳು ಪತ್ತೆಯಾಗಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಬಾಟಲಿ ಕೆಳಗೆ ಬೀಳುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತ ವ್ಯಕ್ತಿ: ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಮದ್ಯ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಕೈಯಿಂದ ಮದ್ಯದ ಬಾಟಲಿ ಕೆಳಗೆ ಬಿದ್ದು ಒಡೆದು ಹೋಗಿದೆ. ಮದ್ಯದ ಬಾಟಲಿ ಕೆಳಗೆ ಬೀಳುತ್ತಿದ್ದಂತೆ ವ್ಯಕ್ತಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಭದ್ರತಾ ಸಿಬ್ಬಂದಿ ಇದ್ದರೂ ಮದ್ಯದ ಬಾಟಲಿ ವಿಧಾನಸೌಧದ ಒಳಗೆ ಬಂದದ್ದು ಹೇಗೆ? ಯಾರಿಗಾಗಿ ಆ ವ್ಯಕ್ತಿ ಮದ್ಯ ತರುತ್ತಿದ್ದ ಎಂಬ ಪ್ರಶ್ನೆ ಎದ್ದಿದೆ.
ವಿಧಾನಸೌಧದಲ್ಲಿ ಮದ್ಯ ಪತ್ತೆಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಬಿಗಿ ಭದ್ರತೆ ಮಧ್ಯೆ ವಿಧಾನಸೌಧಕ್ಕೆ ಬರುವವರನ್ನು ಸ್ಕ್ಯಾನಿಂಗ್ ಮಾಡಲಾಗುತ್ತದೆ. ಆದರೂ ಮದ್ಯ ಶಕ್ತಿಸೌಧದ ಒಳಗೆ ಹೇಗೆ ಬಂತು ಎಂಬುದು ಎಲ್ಲರ ಪ್ರಶ್ನೆಯಾಗಿದೆ.
ಇದನ್ನೂ ಓದಿ : ವಿಧಾನಸೌಧದ ಒಳಗೆ ಸಾಗಿಸುತ್ತಿದ್ದಾಗ ವ್ಯಕ್ತಿಯ ಕೈಯಿಂದ ಜಾರಿದ ಮದ್ಯದ ಬಾಟಲಿ - ವಿಡಿಯೋ