ಹುಬ್ಬಳ್ಳಿ: ಮಳೆಗಾಲ ಬಂದರೆ ವಿದ್ಯುತ್ ಕಣ್ಣಾಮುಚ್ಚಾಲೆ ಆಟವಾಡುತ್ತದೆ. ವಿದ್ಯುತ್ ಟ್ರಿಪಿಂಗ್, ಲೋಡ್ ಶೆಡ್ಡಿಂಗ್ ಸಾಮಾನ್ಯವಾಗಿರುತ್ತದೆ. ಆದರೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಾತ್ರ ಇದಕ್ಕೆ ಅವಕಾಶವಿಲ್ಲ!
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯು (ಹೆಸ್ಕಾಂ) ಭೂಗತ ಕೇಬಲ್ ಅಳವಡಿಸಿದ ಕಾರಣ ವಿದ್ಯುತ್ ವ್ಯತ್ಯಯಕ್ಕೆ ಶೇ. 90ರಷ್ಟು ಕಡಿವಾಣ ಬಿದ್ದಿದೆ. ಹೆಸ್ಕಾಂ ನಗರ ವ್ಯಾಪ್ತಿಯಲ್ಲಿ ಉಪ-ವಿಭಾಗಗಳನ್ನು ವಿಂಗಡಿಸಿ, 12 ಮಂದಿ ಒಳಗೊಂಡಿರುವ ಗುತ್ತಿಗೆದಾರರ ಗುಂಪು ಕಾರ್ಯನಿರ್ವಹಿಸುತ್ತವೆ. ಯಾವುದೇ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಎದುರಾದರೂ ಹೆಸ್ಕಾಂ ಸಿಬ್ಬಂದಿಯೊಂದಿಗೆ ಈ ಗುಂಪು ಕೆಲಸ ಮಾಡುತ್ತದೆ.
ಮಳೆಗಾಲದದಲ್ಲಿ ವಿದ್ಯುತ್ ಸಂಪರ್ಕಕ್ಕೆ ಹೆಚ್ಚು ಹಾನಿ ಉಂಟಾಗುತ್ತವೆ. ಅದಕ್ಕಾಗಿ ಹೆಚ್ಚುವರಿಯಾಗಿ ಪ್ರತಿ ಉಪ ವಿಭಾಗಕ್ಕೆ ತಲಾ 15 ಮಂದಿಯನ್ನೊಳಗೊಂಡ ಮಾನ್ಸೂನ್ ಗುಂಪನ್ನು ಗುತ್ತಿಗೆ ಆಧಾರದಲ್ಲಿ ನಿಯೋಜಿಸಲಾಗಿದೆ. ಜೊತೆಗೆ ವಾಹನಗಳನ್ನೂ ಒದಗಿಸಲಾಗಿದೆ.