ಹುಬ್ಬಳ್ಳಿ: ಸಂಚಾರ ನಿಮಯ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ ನೀಡಿದ್ದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರದಲ್ಲಿ ದಾಖಲೆಯ 73.31 ಲಕ್ಷ ರೂಪಾಯಿ ದಂಡ ಸಂಗ್ರಹವಾಗಿದೆ. ಅರ್ಧದಷ್ಟು ದಂಡದ ಹಣ ಉಳಿತಾಯ ನಿಟ್ಟಿನಲ್ಲಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಾಹನ ಮಾಲೀಕರು, ಸವಾರರು ಸಂಚಾರ ನಿಯಂತ್ರಣ ಕೊಠಡಿಗಳಲ್ಲಿ ಜಮಾಯಿಸಿದ್ದರು.
ಪೊಲೀಸ್ ಇಲಾಖೆಯು ಹಳೇ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಕಿ ದಂಡ ತುಂಬಲು ಶೇ.50ರಷ್ಟು ರಿಯಾಯಿತಿಯನ್ನು ಫೆ.4ರಿಂದ 11ರವರೆಗೆ ನೀಡಲಾಗಿತ್ತು. ಇದಕ್ಕೆ ಶನಿವಾರ ಕೊನೆಯ ದಿನವಾಗಿತ್ತು. ಕರ್ನಾಟಕ ಒನ್, ಪೊಲೀಸ್ ಠಾಣೆ ಹಾಗೂ ಪಿಡಿಎ ಡಿವೈಸ್ ಯಂತ್ರದ ಮೂಲಕ ದಂಡ ಕಟ್ಟಲು ಅನುಕೂಲ ಮಾಡಿಕೊಡಲಾಗಿತ್ತು.
ಕೊನೆ ದಿನವೇ ಅಧಿಕ ದಂಡ ಪಾವತಿ: ದಂಡದ ರಿಯಾಯಿತಿಯನ್ನು ಜನರು ಸದುಪಯೋಗ ಪಡಿಸಿಕೊಂಡಿದ್ದು, ಹು-ಧಾ ಪೊಲೀಸ್ ಕಮಿಷನರೇಟ್ನಲ್ಲಿ ಒಟ್ಟಾರೆ 73,31,925 ರೂಪಾಯಿ ದಂಡ ಪಾವತಿಯಾಗಿದೆ. ಅದರಲ್ಲೂ, ಕೊನೆ ಎರಡು ದಿನಗಳ ಕಾಲ ಹೆಚ್ಚಿನ ಪ್ರಮಾಣ ದಂಡ ವಸೂಲಿ ಆಗಿದೆ. ಫೆ.10ರಂದು 10,91,150 ರೂಪಾಯಿ ದಂಡ ಸಂಗ್ರಹವಾಗಿದ್ದು, ಫೆ.11ರಂದು ಅತೀ ಹೆಚ್ಚು ದಂಡ ಎಂದರೆ 25,61,175 ರೂಪಾಯಿ ಸಂಗ್ರಹಗೊಂಡಿದೆ.
57 ಪ್ರಕರಣಗಳಿಗೆ ಸಂಬಂಧಿಸಿದಂತೆ ವಾಹನ ಸವಾರ, ಹಳೆ ಕೋರ್ಟ್ ಸರ್ಕಲ್ ಬಳಿಯ ನಿವಾಸಿ ಸೂರಜ್ ಠಾಕೂರ ಎಂಬಾತ ಒಬ್ಬನೇ ಬರೋಬ್ಬರಿ 28,500 ರೂಪಾಯಿ ದಂಡ ಪಾವತಿಸಬೇಕಿತ್ತು. ಆದರೆ, ರಿಯಾಯಿತಿ ದಂಡ ಪಾವತಿಯ ಅವಕಾಶವನ್ನು ಉಪಯೋಗಿಸಿಕೊಂಡು ಕೊನೆ ದಿನವಾದ ಶನಿವಾರ ಸೂರಾಜ್ 14,250 ದಂಡವನ್ನು ಕಟ್ಟಿದ್ದಾನೆ.
ರಾಜಧಾನಿಯಲ್ಲಿ ಅತಿ ಹೆಚ್ಚು ದಂಡ ಪಾವತಿ: ಮತ್ತೊಂದೆಡೆ, ರಾಜಧಾನಿ ಬೆಂಗಳೂರಿನಲ್ಲೂ ಭರ್ಜರಿ ದಂಡ ಸಂಗ್ರಹಣೆಯಾಗಿದೆ. ವರ್ಷಗಳಿಂದ ದಂಡ ಕಟ್ಟದೆ ಬಾಕಿ ಉಳಿದಿದ್ದ ಪ್ರಕರಣಗಳ ಪೈಕಿ ಕೊನೆಯ ದಿನವಾದ ಶನಿವಾರ ಒಂದೇ ದಿನ 9.45 ಲಕ್ಷ ಪ್ರಕರಣಗಲ್ಲಿ 31.26 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ. ದಂಡದ ರಿಯಾಯಿತಿ ಘೋಷಿಸಿದ ದಿನದಿಂದ ಬೆಂಗಳೂರಿನಲ್ಲಿ ಒಟ್ಟಾರೆ 120.76 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ.
ಮೈಸೂರು ನಗರದಲ್ಲಿ ಸವಾರರು ಉತ್ತಮ ಸ್ಪಂದನೆ ತೋರಿದ್ದು, ಒಟ್ಟು ಸಂಚಾರ ನಿಯಮ ಉಲ್ಲಂಘನೆ ಸಂಬಂಧ 3 ಲಕ್ಷ ಪ್ರಕರಣಗಳು ವಿಲೇವಾರಿಯಾಗಿವೆ. ಕೊನೆಯ ದಿನ ಶನಿವಾರ 8.79 ಕೋಟಿಯಷ್ಟು ದಂಡ ಸಂಗ್ರಹವಾಗಿದೆ. ಬೆಂಗಳೂರು ನಗರದ ನಂತರ, ಮೈಸೂರು ನಗರದಲ್ಲಿ ಅತಿ ಹೆಚ್ಚು ದಂಡ ಸಂಗ್ರಹವಾಗಿದೆ.
ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಸುಮಾರು 1,300 ಕೋಟಿ ರೂಪಾಯಿಗೂ ಅಧಿಕ ದಂಡ ಪಾವತಿಗೆ ಬಾಕಿ ಇರುವ ಬಗ್ಗೆ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಕಳವಳ ವ್ಯಕ್ತಪಡಿಸಿತ್ತು. ನಂತರ ಈ ಸಮಸ್ಯೆಗೆ ಪರಿಹಾರವಾಗಿ ದಂಡ ಪವಾತಿಸಲು ಶೇ.50ರಷ್ಟು ರಿಯಾಯಿತಿ ನೀಡುವ ಕುರಿತು ಸರ್ಕಾರದ ಜೊತೆಗೆ ಚರ್ಚಿಸಿ ನಿರ್ಧರಿಸಲಾಗಿತ್ತು. ಇದಾದ ಬಳಿಕ ಈ ಕುರಿತಂತೆ ಸಾರಿಗೆ ಇಲಾಖೆಯು ಆದೇಶ ಹೊರಡಿಸಿತ್ತು.
ಇದನ್ನೂ ಓದಿ :ಮೈಸೂರು: ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ, 6 ಕೋಟಿ ದಂಡ ಸಂಗ್ರಹ : ನ್ಯಾಯಾಧೀಶ ಜಿ.ಎಸ್.ಸಂಗ್ರೇಶಿ ಮಾಹಿತಿ