ಹುಬ್ಬಳ್ಳಿ : ಮನೆಯೇ ಮೊದಲ ಪಾಠ ಶಾಲೆ, ತಂದೆ-ತಾಯಿಯೇ ಮೊದಲ ಗುರುಗಳು ಅನ್ನುವ ಮಾತಿಗೆ ಇಲ್ಲೊಬ್ಬ ಪೋರಿ ಸಾಕ್ಷಿಯಾಗಿದ್ದಾಳೆ. ಧಾರವಾಡ ಕುಂದಗೋಳ ತಾಲೂಕಿನ ಬಾಲಕಿ ತನ್ನ ಬುದ್ಧಿಶಕ್ತಿಯಿಂದ ರಾಜ್ಯವಲ್ಲದೆ ಗಡಿಯಾಚೆಯ ಜನರ ಗಮನ ಸೆಳೆದಿದ್ದಾಳೆ. ಈಗ ಕೇವಲ 6ನೇ ವಯಸ್ಸಿಗೇ ಡಾಕ್ಟರೇಟ್ ಗೌರವ ಪಡೆದು ಸಾಧನೆ ಮಾಡಿದ್ದಾಳೆ.
ಈಕೆಯ ಬುದ್ಧಿಶಕ್ತಿ ಗುರುತಿಸಿದ ತಮಿಳುನಾಡಿನ ‘ದಿ ಯೂನಿವರ್ಸಲ್ ತಮಿಳು ಯೂನಿವರ್ಸಿಟಿ’ ಡಾಕ್ಟರೇಟ್ ಗೌರವ ನೀಡಿ ಪುರಸ್ಕರಿಸಿದೆ. ಕುಂದಗೋಳ ಪಟ್ಟಣದ ಈಶ್ವರ ಮುದಗನ್ನವರ ಹಾಗೂ ಕೀರ್ತಿ ಮುದಗನ್ನವರ ದಂಪತಿಯ ಮಗಳು ಶ್ರೀಶಾ ಮುದಗನ್ನವರ.
ಈಕೆ ಕನ್ನಡದ ಮೇರುನಟ ಡಾ.ರಾಜ್ಕುಮಾರ್ ನಟನೆಯ 200ಕ್ಕೂ ಹೆಚ್ಚು ಚಿತ್ರಗಳನ್ನು ಕೇವಲ 3 ನಿಮಿಷದಲ್ಲಿ ಹೇಳಿ ಮುಗಿಸುತ್ತಾಳೆ. ಇದರ ಜೊತೆ ಶ್ಲೋಕ-ಮಂತ್ರಗಳು ಸೇರಿ ಯಾವ ಪ್ರಶ್ನೆ ಕೇಳಿದ್ರೂ ಥಟ್ ಅಂತಾ ಉತ್ತರಿಸಿದ್ದಾಳೆ.
ಬಾಲಕಿಗೆ ಪವರ್ಸ್ಟಾರ್ ಬಹುಪರಾಕ್
ಈಗಾಗಲೇ ಈ ಬಾಲಕಿ ಸಾಕಷ್ಟು ಸಾಧನೆ ಮಾಡಿದ್ದಾಳೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಎಕ್ಸಕ್ಲ್ಯೂಸಿವ್ ವರ್ಲ್ಡ್ ರೆಕಾರ್ಡ್, ಕರ್ನಾಟಕ ಅಚೀವರ್ಸ್ ಆಫ್ ಬುಕ್ ರೆಕಾರ್ಡ್ಸ್, ಫ್ಯೂಚರ್ ಕಲಾಂ ಬುಕ್ ಆಫ್ ರೆಕಾರ್ಡ್ಸ್, ದಿ ಯುನಿವರ್ಸ್ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ತನ್ನ ಹೆಸರು ಅಚ್ಚೊತ್ತಿದ್ದಾಳೆ.
ಇವಳ ನೆನಪಿನ ಶಕ್ತಿ ಕಂಡು ಸ್ವತಃ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಾಲಕಿಯ ಭೇಟಿಯಾಗಿ ಶುಭ ಹಾರೈಸಿದ್ದರು. ಮಗಳ ಸಾಧನೆ ಕುರಿತು ಹರ್ಷ ವ್ಯಕ್ತಪಡಿಸಿರುವ ತಾಯಿ ಕೀರ್ತಿ ಮುದಗನ್ನವರ, ಮಗಳು ಚಿಕ್ಕವಳಿರುವಾಗಲೇ ಪುಸ್ತಕ ಓದುತ್ತಿದ್ದಳು.
ಎಲ್ಲವನ್ನೂ ಚೆನ್ನಾಗಿ ನೆನಪಿಡುತ್ತಿದ್ದಳು. ಹೀಗಾಗಿ, ಆಕೆಯಲ್ಲಿ ವಿಶೇಷತೆ ಇದೆ ಎಂದು ಮನೆಯಲ್ಲಿ ತರಬೇತಿ ನೀಡಿಲು ನಿರ್ಧರಿಸಿದ್ದೆವು. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲಿದ್ದಾಳೆ ಎಂಬುದು ನಮ್ಮ ಅಭಿಲಾಷೆ ಎಂದಿದ್ದಾರೆ.
ಇದನ್ನೂ ಓದಿ: 2 ತಿಂಗಳಲ್ಲಿ ಸಾಲು ಸಾಲು ಹಬ್ಬ.. ಕೋವಿಡ್ 3ನೇ ಅಲೆ ಬಗ್ಗೆ ರಾಜ್ಯಕ್ಕೆ ಕೇಂದ್ರ ತಜ್ಞರಿಂದ ಮತ್ತೊಮ್ಮೆ ಎಚ್ಚರಿಕೆ..