ಹುಬ್ಬಳ್ಳಿ: ಗಂಗಿವಾಳ ಗ್ರಾಮ ಪಂಚಾಯತ್ ಸದಸ್ಯ ದೀಪಕ್ ಪಟದಾರಿ ಹತ್ಯೆ ಪ್ರಕರಣ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರವೀಣ್ ಮುದ್ಲಿಂಗನವರ್, ಯಲ್ಲಪ್ಪ ಮೇಟಿ, ರುದ್ರಪ್ಪ ಮೇಟಿ, ಮಲ್ಲಿಕಾರ್ಜುನ ಮೇಟಿ, ಶಿವು ಮೇಟಿ ಹಾಗೂ ನಾಗರಾಜ್ ಹೆಗ್ಗಣ್ಣನವರ್ ಎಂಬುವರು ಬಂಧಿತ ಆರೋಪಿಗಳಾಗಿದ್ದಾರೆ.
ಜುಲೈ 4ರಂದು ರಾಯನಾಳದಲ್ಲಿ ಗಂಗಿವಾಳ ಗ್ರಾಮ ಪಂಚಾಯತ್ ಸದಸ್ಯ ದೀಪಕ್ ಪಟದಾರಿ (31) ಮೇಲೆ ಆರು ಮಂದಿ ಚೂರಿಯಿಂದ ಇರಿದು ಕೊಂದಿದ್ದರು. ಅದೇ ದಿನ ರಾತ್ರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದೀಪಕ್ ಮೃತಪಟ್ಟಿದ್ದರು. ದೀಪಕ್ ಎರಡು ವರ್ಷಗಳ ಹಿಂದೆ ಮೇಟಿ ಕುಟುಂಬದ ಹುಡುಗಿಯನ್ನು ಮದುವೆಯಾಗಿದ್ದು ದ್ವೇಷಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಸದ್ಯ ಮೇಟಿ ಕುಟುಂಬವೂ ಕೂಡ ರಾಜಕೀಯದಲ್ಲಿ ತೊಡಗಿಸಿಕೊಂಡಿದೆ. ಇತ್ತೀಚೆಗಷ್ಟೇ ದೀಪಕ್ ಅವರು ಗಂಗಿವಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಪ್ರೇಮ ವಿವಾಹ ಹಾಗೂ ರಾಜಕೀಯ ವೈಷಮ್ಯವೇ ಕೊಲೆಗೆ ಕಾರಣ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: ಪ್ರೀತಿ ಕೊಂದ ಕೊಲೆಗಾತಿ: ಹತ್ಯೆಯ ಲೈವ್ ವಿಡಿಯೋ ಮಾಡಿ ಸಿಕ್ಕಿಬಿದ್ದಳು ಮಾಯಾಂಗಿನಿ!