ಹುಬ್ಬಳ್ಳಿ: ಇಲ್ಲಿನ ಸುತಗಟ್ಟಿ ಕಾನೂನು ವಿಶ್ವವಿದ್ಯಾಲಯ ಬಳಿ ಮಂಗಳವಾರ ರಾತ್ರಿ ಕೆಎಸ್ಆರ್ಪಿ ಕಾನ್ಸ್ಟೇಬಲ್ ಕೊಲೆ ಪ್ರಕರಣಕ್ಕೆ ಭಾರಿ ತಿರುವು ಸಿಕ್ಕಿದೆ. ಕಾನ್ಸ್ಟೇಬಲ್ ಅವರ ಮಕ್ಕಳೇ ಕತ್ತು ಹಿಸುಕಿ ಹತ್ಯೆ ಮಾಡಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಕೆಎಸ್ಆರ್ಪಿ ಕಾನ್ಸ್ಟೇಬಲ್ ಇಸ್ಮಾಯಿಲ್ಸಾಬ್ ಅವರನ್ನು ಕಾನೂನು ವಿಶ್ವವಿದ್ಯಾಲಯ ಬಳಿ ಕೊಲೆ ಮಾಡಲಾಗಿತ್ತು. ಕಾನ್ಸ್ಟೇಬಲ್ರ ಇಬ್ಬರು ಮಕ್ಕಳು ಸೇರಿ ಐವರನ್ನು ಎಪಿಎಂಸಿ ನವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಸ್ಮಾಯಿಲ್ಸಾಬ್ ಪುತ್ರ ಫಕುಸಾಬ್ ಕಿಲ್ಲೇದಾರ, ಆತನ ಸ್ನೇಹಿತರಾದ ಶಿವಮೊಗ್ಗ ಜಿಲ್ಲೆಯ ಈಶ್ವರ ಅರಿಕಟ್ಟಿ, ಶಿವಕುಮಾರ ಆರಿಕಟ್ಟಿ, ರೋಹನ್ ಕರಾ, ಇಸ್ಮಾಯಿಲ್ ಪುತ್ರಿ ಗದಗ ಹುಡ್ಕೋ ನಿವಾಸಿ ದಾವಲಮುನ್ನಿ ಕಾಲೇಖಾನ್ ಬಂಧಿತ ಆರೋಪಿಗಳಾಗಿದ್ದಾರೆ.
ಪ್ರಕರಣದ ಹಿನ್ನೆಲೆ: ನವನಗರ ಕೆಸಿಸಿ ಬ್ಯಾಂಕ್ ಕಾಲನಿಯ ಲಕ್ಷ್ಮೀ ಹೈಟ್ಸ್ ಅಪಾರ್ಟ್ಮೆಂಟ್ ನಿವಾಸಿ, ಇಲ್ಲಿನ ರಾಯಾಪುರ ಕೆಎಸ್ಆರ್ಪಿ ಕಾನ್ಸ್ಟೆಬಲ್ ಇಸ್ಮಾಯಿಲ್ಸಾಬ್ ಕಿಲ್ಲೇದಾರ (54) ಅವರ ಪತ್ನಿ ಇತ್ತೀಚೆಗೆ ಮೃತಪಟ್ಟಿದ್ದರು. ಅವರಿಗೆ ಓರ್ವ ಪುತ್ರ, ಪುತ್ರಿ ಇದ್ದಾರೆ. ಈ ನಡುವೆ ಇಸ್ಮಾಯಿಲ್ಸಾಬ್ ಎರಡನೇ ಮದುವೆಯಾಗಿದ್ದರು. ಆ ಮಹಿಳೆ ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಇಸ್ಮಾಯಿಲ್ಸಾಬ್ ಅವರ ಮಕ್ಕಳು ಆಕ್ರೋಶಗೊಂಡಿದ್ದರು. ಇದೇ ಕಾರಣಕ್ಕೆ ತಂದೆಯ ಜೊತೆ ಜಗಳವಾಡಿ ಕತ್ತು ಹಿಸುಕಿ ಕೊಲೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ: ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಆರೋಪ : ಪೊಲೀಸ್ ಕಾನ್ಸ್ಟೇಬಲ್ ಬಂಧನ