ಹುಬ್ಬಳ್ಳಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 15 ಲಕ್ಷ ಹಣವನ್ನು ಹುಬ್ಬಳ್ಳಿಯ ಕಾರವಾರ ರಸ್ತೆಯ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ. ಅಂಕೋಲಾದಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಕಾರನ್ನು ತಪಾಸಣೆ ನಡೆಸಿದಾಗ 15 ಲಕ್ಷ ಹಣ ಪತ್ತೆಯಾಗಿದೆ. ಕೂಡಲೇ ಚೆಕ್ ಪೋಸ್ಟ್ ಸಿಬ್ಬಂದಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಕಲಗೌಡ ಪಾಟೀಲ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಕಾರು ಮತ್ತು ಚಾಲಕನನ್ನು ವಶಕ್ಕೆ ಪಡೆದು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ದಾಖಲೆ ಇಲ್ಲದ ಹಣ, ಬಟ್ಟೆ ವಶಕ್ಕೆ ಪಡೆದಿರುವ ಪೊಲೀಸರು: ಗದಗ ಜಿಲ್ಲೆಯ ಗಜೇಂದ್ರಗಡ ಪೊಲೀಸರು ಶನಿವಾರ ರಾತ್ರಿ ಚೆಕ್ ಪೋಸ್ಟ್ಗಳಲ್ಲಿ ಕಾರ್ಯಾಚರಣೆ ನಡೆಸಿ ದಾಖಲೆಯಿಲ್ಲದ 6 ಲಕ್ಷ 40 ಸಾವಿರ ಹಣ ಹಾಗೂ 5 ಲಕ್ಷ ಬೆಲೆ ಬಾಳುವ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದರು. ಗಜೇಂದ್ರಗಡ ಬಳಿ ಇರುವ ಇಲಕಲ್ಲ ಚೆಕ್ ಪೋಸ್ಟ್ ಬಳಿ ತಪಾಸಣೆ ವೇಳೆ ಹಣ ಸಿಕ್ಕಿತ್ತು. ಕೊಪ್ಪಳದಿಂದ ಹುಬ್ಬಳ್ಳಿಗೆ ಹೊರಟಿದ್ದ ಕಾರಿನಲ್ಲಿ ಹಣ ಹಾಗೂ ಬೆಂಗಳೂರಿನಿಂದ ಗದಗಕ್ಕೆ ಬರುತ್ತಿದ್ದ ಲಾರಿಯಲ್ಲಿ ಬಟ್ಟೆ ಮಟಿರಿಯಲ್ ಪತ್ತೆಯಾಗಿತ್ತು.
"ತಪಾಸಣೆ ವೇಳೆ ಹಣ ಹಾಗೂ ಬಟ್ಟೆಗಳು ಪತ್ತೆಯಾಗಿತ್ತು, ಇದಕ್ಕೆ ಸೂಕ್ತ ದಾಖಲೆ ಇರಲಿಲ್ಲ. ಹಾಗಾಗಿ ಹಣ ಹಾಗೂ ಬಟ್ಟೆ ಮಟಿರಿಯಲ್ಸ್ ವಶಕ್ಕೆ ಪಡೆಯಲಾಗಿದೆ" ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾಹಿತಿ ನೀಡಿದ್ದರು. ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಇದನ್ನೂ ಓದಿ:ವಿಜಯಪುರ: ಗುಟ್ಕಾ ಚೀಲದಲ್ಲಿ ಸಾಗಿಸುತ್ತಿದ್ದ 10 ಲಕ್ಷ ನಗದು ಪೊಲೀಸ್ ವಶಕ್ಕೆ
ದಾಖಲೆ ಇಲ್ಲದೆ ಸಾಗಿಸುತ್ತಿದ್ದ 60ಲಕ್ಷ ಹಣ, ಕಾರು ವಶಕ್ಕೆ ಪಡೆದಿದ್ದ ಪೊಲೀಸರು: ಯಾವುದೇ ಸೂಕ್ತ ದಾಖಲೆ ಇರಿಸಿಕೊಳ್ಳದೇ 60 ಲಕ್ಷ ಮೊತ್ತದ ನಗದನ್ನು ಕಾರಿನಲ್ಲಿ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ವಾಹನ ಸಮೇತ ನಗದನ್ನು ಶನಿವಾರ ವಶಪಡಿಸಿಕೊಂಡಿದ್ದರು. ಕೊಪ್ಪಳ ಜಿಲ್ಲೆಯ ಗಂಗಾವತಿ ಗ್ರಾಮೀಣ ಠಾಣೆ ವ್ಯಾಪ್ತಿಯ ಬಸವಪಟ್ಟಣದ ಹೊರ ವಲಯದಲ್ಲಿ ಈ ಘಟನೆ ನಡೆದಿತ್ತು. ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಶೇಖರಪ್ಪ ಹಾಗೂ ಗ್ರಾಮೀಣ ಸಿಪಿಐ ಮಂಜುನಾಥ ದಾಳಿ ಮಾಡಿ ಹಣದ ಸಮೇತ ನಾಲ್ವರನ್ನು ವಶಕ್ಕೆ ಪಡೆದಿದ್ದರು.
ಗಂಗಾವತಿ ನಗರದ ನಿವಾಸಿಗಳಾದ ವೆಂಕಟೇಶ ಸಿಂಗನಾಳ, ವಿರೂಪಾಕ್ಷ ಗೌಡ, ವೀರಭದ್ರಪ್ಪ ಪಲ್ಲೇದ ಮತ್ತು ಖಾಸಗಿ ವಾಹನ ಚಾಲಕ ಅಬ್ದುಲ್ ರಜಾಕ್ ಸೇರಿ ಕಾರಿನಲ್ಲಿ ಹಣ ಸಾಗಿಸುತ್ತಿದ್ದರು. ಈ ಬಗ್ಗೆ ದಾಖಲೆ ಕೇಳಿದಾಗ ಯಾವುದೇ ಅಧಿಕೃತ ಮಾಹಿತಿ ನೀಡಲಿಲ್ಲ ಎಂದು ಪೊಲೀಸರು ತಿಳಿಸಿದ್ದರು. ದಾಖಲೆ ಇಲ್ಲದೇ ಹಣ ಸಾಗಿಸುತ್ತಿದ್ದ ಪ್ರಕರಣ ಭೇದಿಸಿದ ಹಿನ್ನೆಲೆ ಜಿಲ್ಲಾ ಎಸ್ಪಿ ಯಶೋಧಾ ಒಂಟಿಗೋಡೆ ಶನಿವಾರ ನಗರಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಬಳಿಕ ಮಾತನಾಡಿದ್ದ ಅವರು, ಸದ್ಯಕ್ಕೆ ಹಣ ವಶಕ್ಕೆ ಪಡೆದು ನ್ಯಾಯಾಲಯದ ವಶಕ್ಕೆ ನೀಡಲಾಗಿದೆ. ಹಣದ ವಾರಸುದಾರರಿಗೆ ವಾಣಿಜ್ಯ ಇಲಾಖೆಯಿಂದ ನೋಟಿಸ್ ನೀಡಿ ಹಣದ ಮೂಲ ಮತ್ತು ದಾಖಲೆ ಕೇಳಲಾಗುತ್ತದೆ ಎಂದು ಹೇಳಿದ್ದರು.