ಹುಬ್ಬಳ್ಳಿ: ಕೊರೊನಾ ವಿರುದ್ಧ ಹೋರಾಡುತ್ತಿರುವ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ನಗರದ ಅಂಜುಮನ್ ಸಂಸ್ಥೆ ಕೈ ಜೋಡಿಸಿದ್ದು, ಕೋವಿಡ್ ಕೇರ್ ಕೇಂದ್ರವನ್ನು ಮಾರ್ಪಡಿಸಿರುವುದು ಶ್ಲಾಘನೀಯ. ಆದ್ದರಿಂದ ಸರ್ಕಾರ ಸಂಸ್ಥೆಯ ಸಹಕಾರವನ್ನು ಬಳಸಿಕೊಳ್ಳಬೇಕು ಎಂದು ಶಾಸಕ ಅಬ್ಬಯ್ಯ ಪ್ರಸಾದ್ ಮನವಿ ಮಾಡಿದ್ದಾರೆ.
ನಗರದ ಅಂಜುಮನ್ ಸಂಸ್ಥೆ ಈಗ ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಕೈ ಜೋಡಿಸಿದೆ. ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಸಂಸ್ಥೆ ಸ್ವಯಂ ಪ್ರೇರಿತವಾಗಿ ಪಿ.ಬಿ. ರಸ್ತೆಯಲ್ಲಿರುವ ಅಂಜುಮನ್ ಹಾಲ್ ಬಳಿಯಿರುವ ವಿದ್ಯಾರ್ಥಿನಿಯರ ವಸತಿ ಗೃಹದಲ್ಲಿ 120 ಹಾಸಿಗೆಗಳ ಕೋವಿಡ್ ಕೇರ್ ಕೇಂದ್ರವನ್ನು ಸಿದ್ಧಪಡಿಸಿದೆ. ಸರ್ಕಾರ ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಕೋವಿಡ್ ಕೇರ್ ಕೇಂದ್ರವನ್ನು ಸಂಸ್ಥೆ ಮುಂದಿನ ಎರಡ್ಮೂರು ದಿನಗಳಲ್ಲಿ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಲಿದೆ. ಅಂಜುಮನ್ ಸಂಸ್ಥೆಯ ಈ ಮಹತ್ತರ ಕಾರ್ಯದಲ್ಲಿ ಆಜಾದ್ - ಕೊ-ಬ್ಯಾಂಕ್ 50 ಕಬ್ಬಿಣದ ಮಂಚ ಹಾಗೂ ಕುಂಬಾರ ಮಜ್ಜೀದ್ ಜಮಾತ್ ಮೆಹಬೂಬ್ ಕಾಂಪ್ಲೆಕ್ಸ್ ನಿಂದ 50 ಕಬ್ಬಿಣದ ಮಂಚಗಳನ್ನು ದೇಣಿಗೆಯಾಗಿ ನೀಡಲಾಗಿದೆ, ಇದು ಶ್ಲಾಘನೀಯ. ಸೋಂಕಿತರ ಚಿಕಿತ್ಸೆಗೆ ಅವಶ್ಯಕವಿರುವ ಎಲ್ಲ ಸಿದ್ಧತೆಗಳನ್ನ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಮಾಡಲಾಗುತ್ತಿದೆ. ಕೇಂದ್ರ ಹೇಗಿರಬೇಕೆಂಬ ಬಗ್ಗೆ ಜಿಲ್ಲಾಡಳಿತ ಸಂಸ್ಥೆಗೆ ಮಾರ್ಗದರ್ಶನ ನೀಡಿತ್ತು. ಅದಕ್ಕೆ ತಕ್ಕಂತೆ ಈಗ ಕೇಂದ್ರವನ್ನು ಸಜ್ಜುಗೊಳಿದೆ ಎಂದರು.