ದಾವಣಗೆರೆ: ಕೊರೊನಾ ಸೋಂಕು ನಿಯಂತ್ರಣ ವೇಳೆ ಜಿಲ್ಲೆಯ ಹೋಟೆಲ್ ಮಾಲೀಕರು ತುಂಬಾ ಸಹಕಾರ ನೀಡಿದ್ದೀರಿ. ಮಾನವೀಯತೆ ಮೆರೆಯುವುದರ ಮೂಲಕ ನಮ್ಮೊಂದಿಗೆ ಕೈಜೋಡಿಸಿದ್ದೀರಿ. ಆದ್ರೆ, ಕೆಲವು ಕಡೆ ನಿರೀಕ್ಷಿತ ಮಟ್ಟದಲ್ಲಿ ಸಹಕಾರ ದೊರೆಯುತ್ತಿಲ್ಲ. ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ಹೋಟೆಲ್ ಹಾಗೂ ಲಾಡ್ಜ್ ಮಾಲೀಕರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲ್ಲಿಯವರೆಗೆ ಸಹಕಾರ ನೀಡಿದ್ದೀರಿ. ಇನ್ನು ಮುಂದೆಯೂ ಸಹ ಹೆಚ್ಚಿನ ರೀತಿಯ ಸಹಕಾರ ನೀಡಬೇಕು. ನಿಮಗೆ ಬೇಕಾದ ಎಲ್ಲ ವ್ಯವಸ್ಥೆ ನಾವು ಮಾಡುತ್ತೇವೆ. ಜಿಲ್ಲಾಡಳಿತ ನಿಮಗೆ ಸಹಕರಿಸುತ್ತದೆ. ಇನ್ನು ಮುಂದಿನ 14 ದಿನಗಳು ಬಹಳಷ್ಟು ಗಂಭೀರವಾಗಿರುವುದರಿಂದ ನೀವೆಲ್ಲರೂ ಕೈಜೋಡಿಸಬೇಕು ಎಂದರು.
ಲಾಡ್ಜ್ ಹಾಗೂ ಹೋಟೆಲ್ಗಳಲ್ಲಿ ನೀರಿನ ವ್ಯವಸ್ಥೆ, ವಿದ್ಯುತ್ ಸೇರಿದಂತೆ ಯಾವುದೇ ರೀತಿಯ ತೊಂದರೆ ಆದರೆ, ಕೂಡಲೇ ಸರಿ ಮಾಡಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ಯಾವುದೇ ವ್ಯತ್ಯಯ ಆಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ನಮ್ಮ ಸಹಾಯ ತೆಗೆದುಕೊಳ್ಳಿ. ಪ್ರಧಾನಮಂತ್ರಿ ಮೋದಿ ಅವರ ಕರೆಯಂತೆ ಇಂತಹ ಪರಿಸ್ಥಿತಿಯಲ್ಲಿ ನೀವೆಲ್ಲರೂ ಭಾಗಿಯಾಗುವುದರ ಮೂಲಕ ಇಡೀ ದೇಶವೇ ನಿಮಗೆ ಋಣಿಯಾಗಿರುತ್ತದೆ ಎಂದು ಪ್ರಶಂಸಿದರು.
ಇನ್ನು 28 ದಿನದಿಂದ ಒಂದು ಪಾಸಿಟಿವ್ ಕೇಸ್ ಇಲ್ಲ ಎಂದು ಗ್ರೀನ್ ಜೋನ್ ಘೋಷಣೆ ಮಾಡಲಾಯಿತು. ಅಷ್ಟರಲ್ಲಿ ಮರು ದಿನವೇ ಕೊರೊನಾ ಪಾಸಿಟಿವ್ 2 ಪ್ರಕರಣಗಳು ಕಂಡು ಬಂದವು. ಆ 2 ಪ್ರಕರಣಕ್ಕೆ ಸಂಬಂಧಪಟ್ಟವರ 21 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಇನ್ನೂ ಸುಮಾರು 290 ಸ್ಯಾಂಪಲ್‍ಗಳ ವರದಿ ಬಾಕಿ ಇದ್ದು, ವರದಿಗಾಗಿ ಎದುರು ನೋಡಲಾಗುತ್ತಿದೆ. ಜೊತೆಗೆ ಪಾಸಿಟಿವ್ ಪ್ರಕರಣಕ್ಕೆ ಸಂಬಂಧಪಟ್ಟವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಮಾಹಿತಿ ನೀಡಿದರು.