ದಾವಣಗೆರೆ: ಉಪಚುನಾವಣೆಗೆ ಶಕ್ತಿ ಕೇಂದ್ರ, ಮತಗಟ್ಟೆ ಕೇಂದ್ರಗಳಲ್ಲಿ ಸಿದ್ಧತೆ ಪ್ರಾರಂಭಿಸಿದ್ದೇವೆ. ಐದಾರು ಮಂದಿ ಆಕಾಂಕ್ಷಿಗಳಿದ್ದಾರೆ. ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಶತಾಯಗತಾಯ ಗೆದ್ದೇ ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಗೋಹತ್ಯೆ ನಿಷೇಧವನ್ನು ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದ್ದೆವು. ಆದರೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಗೋಹತ್ಯೆ ನಿಷೇಧ ವಾಪಸ್ ಪಡೆದಿದ್ದರು. ಸಾಧ್ಯವಾದಷ್ಟು ಬೇಗ ಗೋಹತ್ಯೆ ನಿಷೇಧ ಮಾಡುತ್ತೇವೆ. ಅದರಲ್ಲಿ ಯಾವುದೇ ಸಂಶಯ ಬೇಡ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕರಾವಳಿ ಭಾಗದಲ್ಲಿ ಹಟ್ಟಿಗಳಲ್ಲಿ ಗೋವು ಕಳ್ಳತನ ಹೆಚ್ಚಾಗಿತ್ತು. ತಲವಾರು ಹಿಡಿದು ಗೋಹಂತಕರು ಕಳವು ಮಾಡುತ್ತಿದ್ದರು. ಶೃಂಗೇರಿಯಲ್ಲಿ ಎನ್ ಕೌಂಟರ್ ಆಗಿದ್ದು ಯಾರ ಕಾಲದಲ್ಲಿ ಸಿದ್ದರಾಮಣ್ಣ.. ಎಂದು ಪ್ರಶ್ನಿಸಿದರು.
ಸುರೇಶ್ ಅಂಗಡಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಕುರಿತಂತೆ ಚರ್ಚೆ ನಡೆದಿತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅಂಗಡಿ ಸಾವಿನಿಂದ ನಾವು ಈಗ ದುಃಖದಲ್ಲಿದ್ದೇವೆ. ಅವರ ಕುಟುಂಬಕ್ಕೆ ಸಾಂತ್ವನ ಹೇಳಬೇಕಿದೆ. ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಬೇಡ ಎಂದರು.