ದಾವಣಗೆರೆ : ಜಿಲ್ಲೆಯ ನ್ಯಾಮತಿ ತಾಲೂಕಿನ ಗಂಗನಕೋಟೆ ಗ್ರಾಮದಲ್ಲಿ ಮುಳುಗಡೆಯಾದ ಸೇತುವೆಯಲ್ಲಿ ಸಿಲುಕಿದ್ದ ಕಾರು ಮತ್ತು ಚಾಲಕನನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.
ಗಂಗನಕೋಟೆ - ಹೊನ್ನಾಳಿ ನಡುವಿನ ಸಂಪರ್ಕ ಸೇತುವೆ ಮಳೆಯಿಂದ ಮುಳುಗಡೆಯಾಗಿತ್ತು. ಸೇತುವೆ ಮುಳುಗಿರುವುದು ಗೊತ್ತಿದ್ದರೂ, ದುಸ್ಸಾಹಸಕ್ಕೆ ಮುಂದಾದ ವ್ಯಕ್ತಿಯೊಬ್ಬ ಕಾರಿನಲ್ಲಿ ಸೇತುವೆ ದಾಟಲು ಮುಂದಾಗಿದ್ದ. ಈ ವೇಳೆ, ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಕಾರು ಸಮೇತ ಸುಮಾರು ಅರ್ಧ ಗಂಟೆ ಸಮಯ ಸೇತುವೆ ಮಧ್ಯೆ ಸಿಲುಕಿಕೊಂಡಿದ್ದ.
ಓದಿ : Kerala Rain: ತುಂಬಿ ಹರಿದ ಚಾಲಿಯಾರ್ ನದಿ, 9 ತಿಂಗಳ ಗರ್ಭಿಣಿಯ ರಕ್ಷಣೆ
ಕಾರು ಚಾಲಕ ಅಪಾಯಕ್ಕೆ ಸಿಲುಕಿರುವುದನ್ನು ಅರಿತ ಗಂಗನಕೋಟೆ ಗ್ರಾಮಸ್ಥರು ಹಗ್ಗದ ಮೂಲಕ ಕಾರು ಸಮೇತ ಆತನನ್ನು ರಕ್ಷಣೆ ಮಾಡಿದ್ದಾರೆ. ಕೊಂಚ ಯಾಮಾರಿದ್ದರೂ ಕಾರು ಚಾಲಕ ಅಪಾಯಕ್ಕೆ ಸಿಲುಕುತ್ತಿದ್ದ. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಅಪಾಯ ತಪ್ಪಿದೆ. ಪ್ರಾಣಾಪಾಯದಿಂದ ಪಾರಾದ ಕಾರು ಚಾಲಕ ಶಿವಮೊಗ್ಗ ಮೂಲದವನು ಎಂದು ತಿಳಿದು ಬಂದಿದೆ.
ಮೀನು ಹಿಡಿಯುವಾಗ ಕೊಚ್ಚಿ ಹೋದ ಯುವಕ:
ಮೀನು ಹಿಡಿಯಲು ಹೋಗಿ ಯುವಕ ಕೊಚ್ಚಿ ಹೋದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾಂ ಬಳಿ ನಡೆದಿದೆ. ಭಾರಿ ಮಳೆ ಹಿನ್ನೆಲೆ ದೇವರಬೆಳಕೆರೆ ಪಿಕಪ್ ಡ್ಯಾಂನಿಂದ ನೀರು ಹರಿಸಲಾಗಿತ್ತು. ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಮೀನು ಹಿಡಿಯುತ್ತಿದ್ದ ಯುವಕ ಇದ್ದಕ್ಕಿದ್ದಂತೆ ನ ಕೊಚ್ಚಿಹೋಗಿದ್ದಾನೆ. ಸ್ವಲ್ಪ ಹೊತ್ತು ಈಜಾಡಿದ ಆತ ಬಳಿಕ ಈಜಲಾಗದೆ ಸಂಕಷ್ಟಕ್ಕೆ ಅಪಾಯಕ್ಕೆ ಸಿಲುಕಿದ್ದ. ಈ ವೇಳೆ ಅಲ್ಲೇ ಇದ್ದ ಯುವಕರು ಹಗ್ಗದ ಮೂಲಕ ಆತನನ್ನು ರಕ್ಷಣೆ ಮಾಡಿದ್ದಾರೆ.