ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಐತಿಹಾಸಿಕ ಪುರಾತನ ಆಂಜನೇಯ ದೇವಾಲಯ ಶಿಥಿಲಾವಸ್ಥೆಗೆ ತಲುಪಿತ್ತು. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಟೊಂಕ ಕಟ್ಟಿ ನಿಂತ ಗ್ರಾಮಸ್ಥರು ಬರೋಬ್ಬರಿ 6 ಕೋಟಿ ರೂ. ವೆಚ್ಚದಲ್ಲಿ ಹೊಯ್ಸಳರ ಶೈಲಿಯಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆ. ದೇವಸ್ಥಾನ ನಿರ್ಮಾಣ ಮಾಡಲು ಕೆಲ ಗ್ರಾಮಗಳಲ್ಲಿ ಭಕ್ತರಿಂದ ದೇಣಿಗೆ ಸಂಗ್ರಹ ಮಾಡಿದ್ರೆ, ಈ ಕುಳಗಟ್ಟೆ ಗ್ರಾಮದ ಗ್ರಾಮಸ್ಥರು ಮಾತ್ರ ಅವರೇ ದೇಣಿಗೆ ಹಾಕಿಕೊಂಡು ದೇವಸ್ಥಾನ ನಿರ್ಮಾಣ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯ 2017ರಲ್ಲಿ ಶಿಥಿಲಗೊಂಡಿತ್ತು. ಸುಮಾರು ವರ್ಷಗಳ ಹಿಂದೆಯೇ ಆಂಜನೇಯ ಸ್ವಾಮಿಯ ವಿಗ್ರಹ ಮುಕ್ಕಾಗಿತ್ತು. ಬೇರೆ ಮೂರ್ತಿ ಮಾಡಿಸಲು ಗ್ರಾಮಸ್ಥರು ಬೇರೆ ಬೇರೆ ಊರು ಸುತ್ತುತ್ತಿದ್ದರಂತೆ. ಆಗ ಗ್ರಾಮದ ವ್ಯಕ್ತಿಯೊಬ್ಬರ ಮೈಮೇಲೆ ದೇವರು ಬಂದು ನಿಮ್ಮ ಊರಿನಲ್ಲಿ ನನ್ನ ವಿಗ್ರಹವಿದೆ. ಅದನ್ನೇ ಪ್ರತಿಷ್ಠಾಪಿಸಿ ಎಂದಿತ್ತಂತೆ. ಹಾಗಾಗಿ ದೇವಾಲಯ ಮರು ನಿರ್ಮಾಣ ಮಾಡಬೇಕೆಂದು ರಾಂಪುರದ ವಿಶ್ವೇಶ್ವರ ಹಾಲಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಇಡೀ ಗ್ರಾಮಸ್ಥರು ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದರು.
6 ಕೋಟಿ ರೂ. ವೆಚ್ಚದಲ್ಲಿ ದೇಗುಲ ನಿರ್ಮಾಣ: ದೇವಾಲಯ ನಿರ್ಮಾಣಕ್ಕೆ ಯಾವುದೇ ಪಕ್ಷದ ರಾಜಕಾರಣಿಗಳ ಬಳಿಗೆ ಅಥವಾ ಬೇರೆಲ್ಲೂ ಹಣಕಾಸಿಗೆ ಕೈಚಾಚದ ಕುಳಗಟ್ಟೆ ಗ್ರಾಮದ ಜನರು ಸ್ವತಃ ತಾವೇ ದೇಣಿಗೆ ಹಾಕಿ ದೇವಾಲಯ ನಿರ್ಮಾಣ ಮಾಡಬೇಕೆಂದು ಸಭೆಯಲ್ಲಿ ತೀರ್ಮಾನಿಸಿದ್ದರು. ಅದರಂತೆ ಗ್ರಾಮಸ್ಥರು ಇಂತಿಷ್ಟು ಅಂತ ಹಣ ಹೊಂದಿಸಿಕೊಂಡು ಬರೋಬ್ಬರಿ 6 ಕೋಟಿ ವೆಚ್ಚದಲ್ಲಿ ಅದ್ಭುತವಾದ ಹೊಯ್ಸಳ ಶೈಲಿಯ ಕಲ್ಲಿನ ದೇವಾಲಯ ನಿರ್ಮಿಸಿ ಲೋಕಾರ್ಪಣೆ ಮಾಡಿದ್ದಾರೆ.
ಗ್ರಾಮಸ್ಥ ರಾಮಪ್ಪ ಮಾತನಾಡಿ, "ಈ ದೇವಾಲಯ ನಿರ್ಮಾಣ ಮಾಡಲು ಊರಿನ ಮುಖಂಡರು ಸೇರಿ ಸಂಕಲ್ಪ ಮಾಡಿದೆವು. ಅದರಂತೆ ಗ್ರಾಮಸ್ಥರಿಂದ ಸಂಗ್ರಹಿಸಿದ 6 ಕೋಟಿ ರೂ. ದೇಣಿಗೆಯಲ್ಲಿ ದೇವಾಲಯ ನಿರ್ಮಿಸಲಾಗಿದೆ. ಭಕ್ತರಿಂದ ಒಂದು ನಯಾ ಪೈಸೆ ಕೂಡ ದೇವಾಲಯ ನಿರ್ಮಾಣಕ್ಕೆ ಪಡೆದಿಲ್ಲ" ಎಂದರು.
30 ಸಾವಿರದಿಂದ 5 ಲಕ್ಷದವರೆಗೂ ದೇಣಿಗೆ: ಇನ್ನು 1500 ಮನೆಗಳಿರುವ ಕುಳಗಟ್ಟೆ ಗ್ರಾಮದಲ್ಲಿ ಪ್ರತಿ ಮನೆಯವರು ಇಂತಿಷ್ಟು ಅಂತ ದಾನದ ರೂಪದಲ್ಲಿ ಹಣ ನೀಡಿದ್ದಾರೆ. ಒಂದೊಂದು ಕುಟುಂಬ 30 ಸಾವಿರದಿಂದ 5 ಲಕ್ಷದವರೆಗೂ ದೇಣಿಗೆ ನೀಡಿದ್ದಾರೆ. ದೇವಸ್ಥಾನದ ಮಾದರಿ ನೋಡಲು ಗ್ರಾಮಸ್ಥರು ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿದ್ದರು. ಮಾದರಿ ಸಿದ್ಧಪಡಿಸಲು 5 ವರ್ಷ ಕಾಲಾವಕಾಶ ತೆಗೆದುಕೊಂಡಿದ್ಧಾರೆ. ಇದೀಗ ದೇವಾಲಯದ ಸಂಪೂರ್ಣ ಕಾಮಗಾರಿ ಮುಕ್ತಾಯವಾಗಿದೆ.
ಒಳಕಲ್ಲು ಹನುಮಂತಪ್ಪ ಎಂದೇ ಪ್ರಸಿದ್ಧಿ: ಈ ದೇವಾಲಯದ ಆಂಜನೇಯ ಸ್ವಾಮಿ ವಿಶೇಷತೆ ಏನೆಂದರೆ ವಿಗ್ರಹದ ಹಿಂದೆ 19 ದೊಡ್ಡ ಗುಂಡಿಗಳಿವೆಯಂತೆ. ಆದ್ದರಿಂದ ಗ್ರಾಮಸ್ಥರು ಇದನ್ನು 'ಒಳಕಲ್ಲು ಹನುಮಂತಪ್ಪ' ಎಂತಲೂ ಕರೆಯುತ್ತಾರೆ. ಗ್ರಾಮಸ್ಥರಾದ ಭೈರಪ್ಪ ಎನ್ನುವರು ಪ್ರತಿಕ್ರಿಯಿಸಿ "ಚಂದ್ರಶೇಖರಪ್ಪನವರ ಮುಖಂಡತ್ವದಲ್ಲಿ ಈ ದೇವಾಲಯ ನಿರ್ಮಿಸಲಾಗಿದೆ. ಈ ದೇವಸ್ಥಾನ ಆವರಣದಲ್ಲಿ ತಿಮ್ಮಪ್ಪನ ದೇವಸ್ಥಾನ, ದುರ್ಗದೇವಿ, ಭೈರವೇಶ್ವರ, ನವಗ್ರಹ, ವಿಘ್ನೇಶ್ವರ ದೇವಾಲಯ ಸೇರಿದಂತೆ ಹಲವು ದೇವಾಲಯಗಳನ್ನು ಕುಳಗಟ್ಟೆ ಗ್ರಾಮಸ್ಥರ ದೇಣಿಗೆಯಲ್ಲಿ ನಿರ್ಮಾಣ ಮಾಡಲಾಗಿದೆ" ಎಂದರು.
ಒಟ್ಟಾರೆಯಾಗಿ ಧಾರ್ಮಿಕ ಕಾರ್ಯಕ್ರಗಳಿಗೆ ಪುಸ್ತಕ ಹಿಡಿದುಕೊಂಡು ಚಂದಾ ಎತ್ತುವುದೇ ಜಾಸ್ತಿ. ಅಂತವರ ಮಧ್ಯದಲ್ಲಿ ಯಾರ ಸಹಾಯವೂ ಇಲ್ಲದೆ, ರಾಜಕಾರಣಿಗಳ, ಸರ್ಕಾರದ ಅನುದಾನುವು ಇಲ್ಲದೇ 6 ಕೋಟಿ ರೂ. ವೆಚ್ಚದಲ್ಲಿ ಸುಂದರ ಮತ್ತು ಭೌವ್ಯ ದೇಗುಲ ನಿರ್ಮಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ: ನೆನಪಿಗಾಗಿ ಅಗಲಿದ ತಾಯಿಯ ಮಂದಿರ ನಿರ್ಮಿಸಿದ ಮಕ್ಕಳು.. ಇದು ಮಾತೃಪ್ರೀತಿ..!