ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ ವಾಲ್ಮೀಕಿ ಶ್ರೀ ಕಣ್ಣೀರು ಹಾಕಿದ ಘಟನೆ ನಡೆದಿದೆ.
ವಾಲ್ಮೀಕಿ ಜಾತ್ರೆಯಲ್ಲಿ ಮೀಸಲಾತಿ ಘೋಷಣೆ ಮಾಡಬಹುದು ಎಂದು ಸಾಕಷ್ಟು ಭಕ್ತರು ಜಾತ್ರೆಗೆ ಬಂದಿರ್ತಾರೆ. ದೂರದ ಊರಿನಿಂದ ಬೈಕ್ಗಳಲ್ಲಿ ಟ್ರಾಕ್ಟರ್ ಸೇರಿದಂತೆ ಹಲವು ವಾಹನಗಳಲ್ಲಿ ಭಕ್ತರು ಆಗಮಿಸುತ್ತಾರೆ. ಇವರೆಲ್ಲಾ ಸುರಕ್ಷಿತವಾಗಿ ಅವರವರ ಊರುಗಳಿಗೆ ತಲುಪಿದ್ರೋ ಇಲ್ಲವೋ ಎನ್ನುವ ಅತಂಕ ನನ್ನನ್ನು ಕಾಡುತ್ತಿರುತ್ತದೆ ಎಂದು ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿಶ್ರೀ ಗಳಗಳನೆ ಅತ್ತರು.
ಬಳಿಕ ಪ್ರತಿ ವರ್ಷ ಫೆ. 8-9 ಕ್ಕೆ ಜಾತ್ರೆಯಾದ್ರೆ ನನಗೆ ಅತಂಕ ಕಡಿಮೆಯಾಗುವುದು, 11 ರಂದು ಎಲ್ಲರೂ ಸುರಕ್ಷಿತವಾಗಿ ಅವರವರ ಊರುಗಳಿಗೆ ಭಕ್ತರ ಸೇರಿದ್ರೆ ಆಗ ನೆಮ್ಮದಿಯಿಂದ ಇರುತ್ತೇನೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಭಕ್ತರ ಮುಂದೆ ಕಣ್ಣೀರು ಹಾಕುತ್ತಲೇ ಮಾತನಾಡಿದರು.
ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ವಾಲ್ಮೀಕಿ ಶ್ರೀ:
ಸರ್ಕಾರ ವೀರ ವನಿತೆ ಒನಕೆ ಓಬವ್ವ ಜಯಂತಿ ಜಾರಿಗೆ ತಂದಿದೆ ಎಂದು ರಾಜ್ಯ ಸರ್ಕಾರಕ್ಕೆ ರಾಜನಹಳ್ಳಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಅಭಿನಂದನೆ ಸಲ್ಲಿಸಿದರು. ಒನಕೆ ಓಬವ್ವ ಸಾಂಸ್ಕೃತಿಕ ನಾಯಕಿ, ಚಿತ್ರದುರ್ಗವನ್ನು ಕಾಪಾಡಲು ತನ್ನ ಪ್ರಾಣವನ್ನೇ ಬಿಟ್ಟ ವೀರ ವನಿತೆ, ಆಕೆಯ ಜಯಂತಿಯನ್ನು ರಾಜ್ಯ ಸರ್ಕಾರ ನವೆಂಬರ್11 ರಂದು ಆಚರಣೆ ಮಾಡಲಿದೆ. ಇದರಿಂದ ಓಬವ್ವನ ಇತಿಹಾಸ ಎಲ್ಲರಿಗೂ ತಿಳಿಯಲಿದೆ ಎಂದರು.