ದಾವಣಗೆರೆ: ಸರ್ಕಾರ ಘೋಷಣೆ ಮಾಡಿರುವ ಮೀಸಲಾತಿ ನಿರ್ಧಾರದಲ್ಲಿ ಗೊಂದಲಗಳಿವೆ. ನಮ್ಮ ಹೋರಾಟದ ಮೂಲ ಉದ್ದೇಶ ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿಗೆ ಸೇರಿಸಬೇಕೆಂಬುದಾಗಿದೆ. ಇದಕ್ಕಾಗಿ 1994 ರಿಂದಲೂ ಬೇಡಿಕೆ ಇತ್ತು. ಅಂದರೆ ನಮ್ಮನ್ನು ಒಂದು ವರ್ಗದಿಂದ ಇನ್ನೊಂದು ವರ್ಗಕ್ಕೆ ಸೇರಿಸಬೇಕಿತ್ತು. ಆದರೆ ಸರ್ಕಾರ 3ಬಿಗೆ ಒಳಪಟ್ಟ ಎಲ್ಲಾ ಜಾತಿ ಮತ್ತು ಪಂಗಡವನ್ನು 2ಡಿ ಮಾಡಿರುವುದಾಗಿ ಹೇಳಿದೆ. ಇದರಲ್ಲಿ ಎಷ್ಟು ಮೀಸಲಾತಿ ನೀಡಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಹರಿಹರದ ಹನಗವಾಡಿ ಗ್ರಾಮದ ಪಂಚಮಸಾಲಿ ಮಠದಲ್ಲಿ ವಚನಾನಂದ ಸ್ವಾಮೀಜಿ ತಿಳಿಸಿದರು.
ಸರ್ಕಾರ ಮೀಸಲಾತಿಯನ್ನು ಇಡಬ್ಲೂಎಸ್ ನಿಂದ ಕೊಡಬಹುದು ಎಂದು ಹೇಳಿದೆ. ಇದಕ್ಕೆ ಕೇಂದ್ರ ಸರ್ಕಾರದಿಂದ ಮಾತ್ರ ಶೇ10ರಷ್ಟು ಮೀಸಲಾತಿ ನಿಗದಿಯಾಗಿದೆ. ಈ ಇಡಬ್ಲೂಎಸ್ ಅನ್ನು ಒಬಿಸಿ ವರ್ಗದವರಿಗೆ ಕೂಡಲು ಸಾಧ್ಯವೇ ಎಂದು ತಿಳಿದುಕೊಳ್ಳಬೇಕು. ಈ ಬಗ್ಗೆ ಕಾನೂನು ತಜ್ಞರು ಹಾಗು ನ್ಯಾಯವಾದಿಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಮೀಸಲಾತಿ ಕುರಿತು ಸರ್ಕಾರದ ತೀರ್ಮಾನ: ರಾಜ್ಯ ಸರ್ಕಾರ ಪಂಚಮಸಾಲಿ ಹಾಗೂ ಒಕ್ಕಲಿಗ ಮೀಸಲಾತಿ ಬೇಡಿಕೆಯ ಬೆನ್ನಲ್ಲೇ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡು ಎರಡು ಪ್ರಬಲ ಸಮುದಾಯಗಳಿಗೆ 2C ಹಾಗೂ 2D ಪ್ರವರ್ಗ ಸೃಷ್ಟಿ ಮಾಡಿ ಮೀಸಲಾತಿ ಘೋಷಣೆ ಮಾಡಿದೆ. 3A ನಲ್ಲಿರುವ ಒಕ್ಕಲಿಗರಿಗೆ 2C ಪ್ರವರ್ಗ ಸೃಷ್ಟಿಸಲಾಗಿದ್ದರೆ, 3B ಯಲ್ಲಿದ್ದ ಲಿಂಗಾಯಿತರಿಗೆ 2D ಕ್ಯಾಟಗರಿ ಸೃಷ್ಟಿಸಿ ತೀರ್ಮಾನ ಕೈಗೊಂಡಿದೆ. ಪಂಚಮಸಾಲಿಗರು ಕೇಳಿದ 2A ಮೀಸಲಾತಿಯನ್ನು ಸರ್ಕಾರ ನೀಡದಿರಲು ನಿರ್ಧರಿಸಿದೆ. ಅದರ ಬದಲಿಗೆ ಪಂಚಮಸಾಲಿ ಸೇರಿ ವೀರಶೈವ ಲಿಂಗಾಯತರಿಗೆ 2D ಪ್ರತ್ಯೇಕ ಪ್ರವರ್ಗ ಸೃಷ್ಟಿಸಲು ಉದ್ದೇಶಿಸಿದೆ. ಎಷ್ಟು ಪ್ರಮಾಣದಲ್ಲಿ ಮೀಸಲಾತಿ ನೀಡಬೇಕು ಎಂಬ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ವರದಿ ಬಂದ ಬಳಿಕ ನಿರ್ಧಾರ ಮಾಡಲು ಸಂಪುಟ ತೀರ್ಮಾನ ಮಾಡಿದೆ ಎಂದು ಗುರುವಾರ ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದರು.
ಇದನ್ನೂ ಓದಿ:ಲಿಂಗಾಯತ, ಒಕ್ಕಲಿಗರಿಗೆ 2D - 2C ಪ್ರವರ್ಗ ಮೀಸಲಾತಿ: ಸರ್ಕಾರದ ರಿಸರ್ವೇಶನ್ ಮರು ಹಂಚಿಕೆ ಲೆಕ್ಕಾಚಾರವೇನು?