ದಾವಣಗೆರೆ: ಯುವತಿಯ ಸಲುವಾಗಿ ಇಬ್ಬರು ಸ್ನೇಹಿತರ ನಡುವೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಹೊರವಲಯದಲ್ಲಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹರಿಹರದ ವಿದ್ಯಾನಗರದ ನಿವಾಸಿ ಅಫ್ತಾಬ್ ಖಾನ್(21) ಸ್ನೇಹಿತನಿಂದಲೇ ಕೊಲೆಯಾದ ಯುವಕ. ಆರೋಪಿ ರೋಷನ್ ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಸ್ನೇಹಿತ.
ತಡವಾಗಿ ಬೆಳೆಕಿಗೆ ಬಂದ ಪ್ರಕರಣ
ಆಫ್ತಾಬ್ ಖಾನ್ ತಂದೆ ಅಕ್ಬರ್ ಖಾನ್ ಹರಿಹರ ನಗರದಲ್ಲಿ ಕೇಬಲ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಡಿಪ್ಲೋಮಾ ವಿದ್ಯಾರ್ಥಿಯಾದ ಅಫ್ತಾಬ್ ಖಾನ್ ಕಾಲೇಜು ರಜೆ ಇರುವುದರಿಂದ ಕೇಬಲ್ ರಿಪೇರಿ ಕೆಲಸಕ್ಕೆ ತೆರಳಿದ್ದಾನೆ. ರಾತ್ರಿಯಾದರೂ ಮನೆಗೆ ಬಾರದಿದ್ದರಿಂದ ಸ್ನೇಹಿತ ರೋಷನ್ ನೊಂದಿಗೆ ಆಫ್ತಾಬ್ ಹೋಗಿದ್ದ ಎಂಬ ಮಾಹಿತಿ ಆಫ್ತಾಬ್ ತಂದೆಗೆ ದೊರೆತಿದೆ. ತಕ್ಷಣ ರೋಷನ್ನನ್ನು ವಿಚಾರಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಕಾಲುವೆಗೆ ತಳ್ಳಿ ಕೊಲೆ ಮಾಡಿದ ಗೆಳೆಯ
ಯುವತಿ ವಿಚಾರವಾಗಿ ಆಫ್ತಾಬ್ ಖಾನ್ ಹಾಗೂ ರೋಷನ್ ನಡುವೆ ಹರಿಹರ ಹೊರವಲಯದ ಹೊಸ ಕೆಹೆಚ್ಬಿ ಕಾಲೋನಿಯ ಶೇರಾಪುರದ ಕಾಲುವೆ ಬಳಿ ಜಗಳ ನಡೆದಿದೆ. ಈ ವೇಳೆ ಆಫ್ತಾಬ್ ಖಾನ್ನನ್ನು ರೋಷನ್ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದಾನೆ.