ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಹರಗನಹಳ್ಳಿ ಬಳಿಯ ಚೆಕ್ ಡ್ಯಾಂ ಬಳಿ ರೀಲ್ಸ್ ಮಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ. ಹರಿಹರದ ಆಶ್ರಯ ಬಡಾವಣೆ ಪವನ್ (25) ಹಾಗೂ ಪ್ರಕಾಶ್ (24) ನೀರುಪಾಲಾದ ಯುವಕರು.
ಮೃತ ಪವನ್ ಹಾಗೂ ಪ್ರಕಾಶ್ ಸ್ನೇಹಿತರಾಗಿದ್ದು, ರೀಲ್ಸ್ ಮಾಡುವ ವೇಳೆ ದುರಂತ ಸಂಭವಿಸಿದೆ. ಆಕಸ್ಮಿಕವಾಗಿ ನೀರಿಗೆ ಬಿದ್ದ ಪ್ರಕಾಶ್ನನ್ನು ರಕ್ಷಿಸಲು ಸ್ನೇಹಿತ ಪವನ್ ಸಹ ನೀರಿಗಿಳಿದಿದ್ದು, ಇಬ್ಬರೂ ಕಣ್ಮರೆಯಾಗಿದ್ದರು. ಬಳಿಕ ಹರಿಹರದ ರಾಘವೇಂದ್ರ ಮಠದ ಬಳಿ ಪ್ರಕಾಶ್ ಶವ ಪತ್ತೆಯಾಗಿದ್ದು, ಮತ್ತೋರ್ವನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದರೂ ಕೂಡ ಈ ವಿಚಾರ ಯಾರಿಗೂ ತಿಳಿದಿರಲಿಲ್ಲ. ಮೃತರೊಂದಿಗೆ ಹನುಮಂತ ಎಂಬ ಯುವಕ ಕೂಡ ಇದ್ದ. ಈ ಇಬ್ಬರೂ ನೀರಿಗೆ ಬಿದ್ದ ತಕ್ಷಣ ಹನುಮಂತ ಅವರನ್ನು ರಕ್ಷಿಸಲು ಯತ್ನಿಸಿ ವಿಫಲನಾಗಿದ್ದಾನೆ. ನಂತರ ಘಟನೆಯಿಂದ ಭಯಗೊಂಡು ಎರಡ್ಮೂರು ದಿನಗಳಿಂದ ತನಗೆ ಏನು ಗೊತ್ತೇ ಇಲ್ಲ ಎಂಬಂತಿದ್ದ ಎನ್ನಲಾಗಿದೆ.
ಪೊಲೀಸರು ಹನುಮಂತನನ್ನು ಕರೆದು ವಿಚಾರಣೆ ನಡೆಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಮೃತದೇಹಕ್ಕಾಗಿ ಶೋಧ ನಡೆಸಿದಾಗ ಪ್ರಕಾಶ್ ಮೃತದೇಹ ಸಿಕ್ಕಿದೆ. ಪವನ್ಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಇದನ್ನೂ ಓದಿ: ಕ್ಯಾಮರಾಗೆ ಪೋಸ್ ಕೊಡುವಾಗ ಆಯತಪ್ಪಿ ಜಲಪಾತಕ್ಕೆ ಬಿದ್ದ ಯುವಕ- ವೈರಲ್ ವಿಡಿಯೋ