ದಾವಣಗೆರೆ: ಪ್ರಸ್ತುತ ದಿನಮಾನಗಳಲ್ಲಿ ಲಕ್ಷಗಟ್ಟಲೆ ಹಣ ಪೀಕುವ ವೈದ್ಯರೇ ಹೆಚ್ಚು. ಆದರೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ವೈದ್ಯರೊಬ್ಬರು ಬಡವರ ಪಾಲಿನ ಆರಾಧ್ಯದೈವವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಆಸ್ಪತ್ರೆಗೆ ಬರುವ ಬಡ, ಮಧ್ಯಮ ವರ್ಗದ ಜನರಿಂದ ಕೇವಲ 2 ರೂಪಾಯಿ ಅಥವಾ ಹೆಚ್ಚೆಂದರೆ 5 ರೂಪಾಯಿ ಪಡೆದು ಚಿಕಿತ್ಸೆ ನೀಡುತ್ತಾ ಸಂತೇಬೆನ್ನೂರಿನ ನಮ್ ಡಾಕ್ಟರ್ ಎಂಬ ಖ್ಯಾತಿ ಗಳಿಸಿದ್ದಾರೆ. ಇದೀಗ ಇವರ ಸೇವೆಯನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. 70ರ ಇಳಿವಯಸ್ಸಿನಲ್ಲಿಯೂ ರೋಗಿಗಳಿಗೆ ಔಷಧೋಪಚಾರ ಮಾಡುತ್ತಿರುವ ಇವರ ಹೆಸರು ಡಾ ಎ ಬಸವಂತಪ್ಪ.
ಇವರು ಸಿದ್ದೇಶ್ವರ ಕ್ಲಿನಿಕ್ ಇಟ್ಟುಕೊಂಡು ಬಡ ರೋಗಿಗಳ ಸೇವೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ಹಣ ಇಲ್ಲ ಎಂದು ಆಸ್ಪತ್ರೆಗೆ ಬರುವವರಿಗೆ ಉಚಿತವಾಗಿಯೇ ಚಿಕಿತ್ಸೆ ನೀಡುತ್ತಿದ್ದಾರೆ. ಜತೆಗೆ ಆಹಾರವನ್ನೂ ಕೂಡಾ. ಸಂತೇಬೆನ್ನೂರು ಸುತ್ತಮುತ್ತಲಿನ 40 ಕ್ಕೂ ಹೆಚ್ಚು ಹಳ್ಳಿಗಳಿಂದ ರೋಗಿಗಳು ಇವರ ಬಳಿಗೆ ಆಗಮಿಸುತ್ತಾರೆ.
ಬಸವಂತಪ್ಪನವರ ತಂದೆ ಸಿದ್ದಪ್ಪನವರು, ಹಣದ ಹಿಂದೆ ಹೋಗ್ಬೇಡ, ಬಡವರ ಸೇವೆ ಮಾಡು ಎಂದು ಹೇಳಿದ್ದ ಮಾತುಗಳನ್ನು ಆದರ್ಶವಾಗಿ ತೆಗೆದುಕೊಂಡು ಅತಿ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲು ಆರಂಭಿಸಿದರಂತೆ. ಇದು ಇವರಿಗೆ ಮುಂದೆ 'ಎರಡು ರೂಪಾಯಿ ವೈದ್ಯರು' ಎಂದೇ ಖ್ಯಾತಿಗಳಿಸಿ ಕೊಟ್ಟಿದೆ.
ಸಿದ್ದಪ್ಪ ಹಾಗು ಹಾಲಮ್ಮ ದಂಪತಿಯ ಎರಡನೇ ಪುತ್ರನಾಗಿ 1951 ಜನಿಸಿದ ಇವರು ಸಿರಿಗೆರೆಯಲ್ಲಿ ಎಸ್ಎಸ್ಎಲ್ಸಿ, ಶಿವಮೊಗ್ಗದ ಸಹ್ಯಾದ್ರಿ ಪಿಯು ಕಾಲೇಜಿನಲ್ಲಿ ಪಿಯುಸಿ ಹಾಗು ಮೈಸೂರು ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ.
1987 ರಲ್ಲಿ ಸಂತೇಬೆನ್ನೂರಿನ ಸಿದ್ದೇಶ್ವರ ಕ್ಲಿನಿಕ್ ಆರಂಭಿಸಿ ಮುಂದೆ 18 ವರ್ಷಗಳ ಕಾಲ ಕೇವಲ ಎರಡು ರೂಪಾಯಿ ಮತ್ತು 10 ವರ್ಷ ಐದು ರೂಪಾಯಿ ಪಡೆದು ಸೇವೆ ನೀಡಿದ್ದಾರೆ. ಹೀಗಾಗಿ, ಇವರನ್ನು ಜನರು ಇವರನ್ನು ಪ್ರೀತಿಯಿಂದ ನಮ್ ವೈದ್ಯರು ಎಂದು ಕರೆಯುತ್ತಿದ್ದಾರೆ.
ಹುಡುಕಿ ಬಂತು ರಾಜ್ಯೋತ್ಸವ ಪ್ರಶಸ್ತಿ: ಇದೀಗ ಸರ್ಕಾರ ಇವರ ಸಮಾಜ ಸೇವೆಯನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ.
ಇದನ್ನೂ ಓದಿ: ಕಿಮ್ಸ್ನಿಂದ ಮತ್ತೊಂದು ಸಾಧನೆ: ಅಪರೂಪದ ಶಸ್ತ್ರ ಚಿಕಿತ್ಸೆ ಮೂಲಕ ಬಡರೋಗಿಯ ಜೀವ ಉಳಿಸಿದ ಸಂಜೀವಿನಿ