ದಾವಣಗೆರೆ: ಆ ಗ್ರಾಮದಲ್ಲಿ ಸ್ಮಶಾನ ಏನೋ ಇದೆ. ಆದ್ರೆ ಅಲ್ಲಿಗೆ ಮೃತದೇಹಗಳನ್ನು ಕೊಂಡೊಯ್ಯಲು ದಾರಿ ಮಾತ್ರ ಕಾಣದಂತಾಗಿದೆ. ಹಲವು ವರ್ಷಗಳಿಂದ ಇದ್ದ 12 ಅಡಿ ಅಗಲದ ದಾರಿಯನ್ನು ಕೆಲವರು ಒತ್ತವರಿ ಮಾಡಿಕೊಂಡಿದ್ದು, ಗ್ರಾಮದಲ್ಲಿ ಯಾರಾದರು ನಿಧನರಾದರೆ ಅವರ ಮೃತದೇಹವನ್ನು ಸ್ಮಶಾನಕ್ಕೆ ಸಾಗಿಸಲು ಭತ್ತದ ಪೈರಿನಲ್ಲೇ ಸುಮಾರು ಅರ್ಧ ಕಿ.ಮೀ. ಹೊತ್ತು ಸಾಗಬೇಕಿದೆ.
ತಾಲೂಕಿನ ಕೈದಾಳೆ ಗ್ರಾ.ಪಂ ವ್ಯಾಪ್ತಿಯಲ್ಲಿನ ಗಿರಿಯಾಪುರ ಗ್ರಾಮದಲ್ಲಿ ಎರಡು ಎಕರೆ ವಿಶಾಲವಾದ ಜಾಗದಲ್ಲಿ ಸ್ಮಶಾನವೇ ಇದೆ. ಆದರೆ ಸ್ಮಶಾನಕ್ಕೆ ಸಾವನ್ನಪ್ಪಿದವರನ್ನು ಸಾಗಿಸಲು ಸರಿಯಾದ ದಾರಿ ವ್ಯವಸ್ಥೆ ಇಲ್ಲದಂತಾಗಿದೆ. ಈ ಮೊದಲು ಸುಮಾರು 12 ಅಡಿ ಅಗಲದ ದಾರಿ ಇತ್ತಂತೆ. ಆದರೆ ಕುಕ್ಕುವಾಡ ಗ್ರಾಮದ ಸುರೇಂದ್ರಯ್ಯ ಹಾಗೂ ಬಸವರಾಜಯ್ಯನವರು ಈ ದಾರಿಯನ್ನು ಬಿಡದೆ ಒತ್ತುವರಿ ಮಾಡಿ ಭತ್ತವನ್ನು ಬಿತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇದು ಗೋಮಾಳ ಜಾಗವಾಗಿದ್ದು, ಸುರೇಂದ್ರಯ್ಯ ಹಾಗೂ ಬಸವರಾಜಯ್ಯನವರಿಗೆ ಸೇರಿದ 23 ಗುಂಟೆ ಜಾಗಕ್ಕೆ ಕಂದಾಯ ಇಲಾಖೆ ಈಗಾಗಲೇ ಹಕ್ಕು ಪತ್ರವನ್ನು ನೀಡಿದೆ. 23 ಗುಂಟೆ ಜಾಗ ಇವರಿಗೆ ಸೇರಿದ್ದಾದರು ಕೂಡ ಇದಲ್ಲದೆ ಸ್ಮಶಾನಕ್ಕೆ ಸೇರಿದ ಎರಡು ಎಕರೆ ಜಾಗವನ್ನು ಹಾಗು ದಾರಿಯನ್ನು ಬಿಡದೆ ಒತ್ತುವರಿ ಮಾಡಿಕೊಂಡು ಭತ್ತದ ಪೈರು ಹಚ್ಚಿದ್ದಾರೆ. ಇದರಿಂದ ಸ್ಮಶಾನಕ್ಕೆ ತೆರಳಲು ಈ ಗ್ರಾಮದ ಜನರಿಗೆ ದಾರಿ ಕಾಣದಂತಾಗಿದೆ.
ಕಳೆದ ದಿನ ಇದೇ ಗ್ರಾಮದಲ್ಲಿ ವೃದ್ಧರೊಬ್ಬರು ಸಾವನಪ್ಪಿದ್ದರಿಂದ ಅವರ ಮೃತದೇಹವನ್ನು ಭತ್ತದ ಪೈರಿನಲ್ಲೇ ಸ್ಮಶಾನಕ್ಕೆ ಕೊಂಡೊಯ್ಯಲು ಹರಸಾಹಸ ಪಡಬೇಕಾಯಿತ್ತಂತೆ. ದಶಕಗಳಿಂದ ಇದ್ದ ಸ್ಮಶಾನದ ದಾರಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಒತ್ತುವರಿ ಮಾಡಲಾಗಿದೆ. ನಮಗೆ ಸ್ಮಾಶನಕ್ಕೆ ದಾರಿ ಬೇಕೆಂದು ಗಿರಿಯಾಪುರ ಗ್ರಾಮಸ್ಥರು ಪಟ್ಟು ಹಿಡಿದಿದ್ದು, ಜಿಲ್ಲಾಧಿಕಾರಿ ಬಳಿ ನಿಯೋಗ ಹೋಗಲು ಸಜ್ಜಾಗಿದ್ದಾರೆ.