ದಾವಣಗೆರೆ: 'ಶಿವಕುಮಾರ್ ಉದಾಸಿ ಮತ್ತು ನಾನು ಅಣ್ಣ-ತಮ್ಮ ಇದ್ದಂತೆ ಇದೀವಿ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾನು ಸಿ.ಎಂ ಉದಾಸಿಯವರ ಮಾನಸ ಪುತ್ರ' ಎಂದು ಬಿಜೆಪಿ ಹಾನಗಲ್ ಅಭ್ಯರ್ಥಿ ಶಿವರಾಜ್ ಸಜ್ಜನ್ ಹೇಳಿದ್ದಾರೆ.
ಸಜ್ಜನ್ಗೆ ಟಿಕೆಟ್ ನೀಡಿರುವ ಶಿವಕುಮಾರ್ ಉದಾಸಿ ಬೇಸರಗೊಂಡಿದ್ದ ವಿಚಾರವಾಗಿ ನಗರದ ಜಿಎಂಐಟಿ ಅತಿಥಿಗೃಹದಲ್ಲಿ ಪ್ರತಿಕ್ರಿಯಿಸಿದ ಅವರು, 'ನಾನು ಉದಾಸಿಯವರ ಜೊತೆ 38 ವರ್ಷದಿಂದಲೂ ಇದ್ದೇನೆ. 2004 ರಲ್ಲಿ ಎಂಎಲ್ಎ ಟಿಕೆಟ್, 2008ರಲ್ಲಿ ಎಂಲ್ಸಿ ಟಿಕೆಟ್ ನನಗೆ ಕೊಡಿಸಿದ್ದರು. ಕೆಲವು ಭಿನ್ನಾಭಿಪ್ರಾಯ ಇತ್ತು. ಅದರೆ ನಾಮಪತ್ರ ಸಲ್ಲಿಸುವ ದಿನ ಹೆಚ್ಚು ಜನ ಸೇರಿದ್ದರು. ಹೀಗಾಗಿ ಯಾವುದೇ ಭಿನ್ನಾಭಿಪ್ರಾಯ ಮುಂದುವರಿದಿಲ್ಲ' ಎಂದರು.
'ಸಿಎಂ ಕೂಡ ನಮ್ಮ ಜಿಲ್ಲೆಯವರು. ನಮ್ಮ ಕ್ಷೇತ್ರದ ಅಳಿಯಂದಿರು. ಆದ್ದರಿಂದ ಜನರು ಕೂಡ ಸಾಕಷ್ಟು ಒಲವು ತೋರುತ್ತಿದ್ದಾರೆ. ನನಗೆ ಟಿಕೆಟ್ ಸಿಕ್ಕಿದ್ದಕ್ಕೆ ಪ್ರತಿಭಟನೆ ನಡೆದವು. ಮರುದಿನ ತಣ್ಣಗಾದವು. ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಅಭ್ಯರ್ಥಿ ಎಂದು ಘೋಷಣೆ ಮಾಡಿದ ನಂತರ ಸಿಎಂರನ್ನು ಭೇಟಿಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಭೇಟಿಯಾಗಲು ಬಂದಿದ್ದೇನೆ' ಎಂದು ತಿಳಿಸಿದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಪ್ರತಿಕ್ರಿಯಿಸಿ, 'ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳೇ ಗೆಲುವು ಪಡೆಯುತ್ತಾರೆ. ರಾಷ್ಟ್ರೀಯ ನಾಯಕರು ಚುನಾವಣೆ ಪ್ರಚಾರಕ್ಕೆ ಬರುವ ಸಾಧ್ಯತೆ ಇಲ್ಲ. ಮಾಜಿ ಸಿಎಂ ಬಿಎಸ್ವೈ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ' ಎಂದು ಹೇಳಿದರು.
ಇದನ್ನೂ ಓದಿ: ದಾವಣಗೆರೆಗೆ ಸಿಎಂ ಆಗಮನ : ಹಾನಗಲ್ ಉಪಚುನಾವಣೆ ಬಗ್ಗೆ ಮಹತ್ವದ ಚರ್ಚೆ