ದಾವಣಗೆರೆ: ಗ್ರಾಮದ ಚರಂಡಿಗಳನ್ನು ಸ್ವಚ್ಛಗೊಳಿಸದ ಗ್ರಾಮ ಪಂಚಾಯ್ತಿ ಆತಳಿತದ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾದು ಕಾದು ಸ್ತುಸ್ತಾದ ಗ್ರಾಮಸ್ಥರು ಚರಂಡಿಯಲ್ಲಿನ ಕೆಸರನ್ನು ಗ್ರಾಪಂ ಕಚೇರಿಯೊಳಗೇ ತಂದು ಸುರಿದು ಕಿಡಿಕಾರಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದಿದ್ದಿಗಿ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ. ಗ್ರಾಪಂ ಪಿಡಿಒ ಕುಳಿತುಕೊಳ್ಳುವ ಟೇಬಲ್ ಮೇಲೆಯೇ ಚರಂಡಿ ತ್ಯಾಜ್ಯ ಸುರಿದು ಇತ್ತೀಚೆಗೆ ಪ್ರತಿಭಟನೆ ನಡೆಸಿದರು.
''ಗ್ರಾಮದಲ್ಲಿರುವ ಚರಂಡಿಗಳು ತುಂಬಿಕೊಂಡಿದ್ದು, ಗಬ್ಬೆದ್ದು ನಾರುತ್ತಿವೆ. ಚರಂಡಿ ನೀರು ನಿಂತುಕೊಂಡಿರುವುದರಿಂದ ಸೊಳ್ಳೆಗಳು ಕಾಟವೂ ಮಿತಿ ಮೀರಿದೆ. ಇದರಿಂದ ಗ್ರಾಮದಲ್ಲಿರುವ ನಿವಾಸಿಗಳು ಅನಾರೋಗ್ಯಕ್ಕೆ ಈಡಾಗಿದ್ದಾರೆ. ಕಟ್ಟಿಕೊಂಡಿರುವ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಹಲವು ಬಾರಿ ಪಿಡಿಒಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ದಿದ್ದಿಗೆ ಗ್ರಾಪಂ ಪಿಡಿಒ ಅವರು ಸಕಾಲಕ್ಕೆ ಕಚೇರಿಗೆ ಬರುವುದಿಲ್ಲ. ಗ್ರಾಮಗಳ ನೈರ್ಮಲ್ಯದ ಬಗ್ಗೆ ಗಮನಹರಿಸುತ್ತಿಲ್ಲ'' ಎಂದು ಗ್ರಾಮಸ್ಥರಾದ ಶೇಖರ್, ಮಹದೇವಪ್ಪ, ಸುರೇಶ್, ಪ್ರವೀಣ್, ರಾಮಣ್ಣ, ವಿಕಾಸ್ ಆಕ್ರೋಶ ವ್ಯಕ್ತಪಡಿಸಿದರು.
''ದಿದ್ದಿಗಿ ಗ್ರಾಪಂ ಪಿಡಿಒ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದೇ ಇರುವುದರಿಂದ ಸರ್ಕಾರಿ ಕೆಲಸಗಳಿಗಾಗಿ ಪದೇ ಪದೆ ಅಲೆದಾಡುವಂತಾಗಿದೆ. ಅಧಿಕಾರಿಗಳು ಕೈ ತುಂಬಾ ವೇತನ ಪಡೆಯುತ್ತಿದ್ದರೂ ಸಾರ್ವಜನಿಕರ ಕೆಲಸ ಮಾಡಿಕೊಡುತ್ತಿಲ್ಲ. ಈ ರೀತಿಯ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು'' ಎಂದು ಗ್ರಾಮದ ನಿವಾಸಿಗಳು ಆಗ್ರಹಿಸಿದರು.
ಚರಂಡಿ ಸ್ವಚ್ಛಗೊಳಿಸುವಂತೆ ಗಮನಕ್ಕೆ ತಂದರೂ ಪ್ರಯೋಜನವಿಲ್ಲ: ''ನಮ್ಮ ಗ್ರಾಪಂ ತುಂಬಾ ಗಲೀಜು ಇದೆ. ವಿವಿಧ ಬಡವಾಣೆಗಳ ಚರಂಡಿಯಲ್ಲಿ ನೀರು ನಿಂತಿದ್ದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಹಲವು ಬಾರಿ ಸ್ವಚ್ಛತೆಗಾಗಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಗ್ರಾಪಂ ಕಚೇರಿಗೆ ಯಾವಾಗ ಹೋದರೂ ನಮ್ಮ ಕಣ್ಣಿಗೆ ಪಿಡಿಒ ಕಾಣಿಸಿಲ್ಲ. ನಮ್ಮ ಪಂಚಾಯಿತಿಯಲ್ಲಿ ಪಿಡಿಒ ಇದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಯಾವಾಗ ಬಂದ್ರೂ ಅವರು ನಮಗೆ ಸಿಕ್ಕಿಲ್ಲ. ಅದಕ್ಕೆ ಚರಂಡಿಯಲ್ಲಿದ್ದ ಕೊಳಕು ತಂದು ಕಚೇರಿಯೊಳಗೆ ಸುರಿದ್ದೇವೆ. ಅವರಿಗೆ ಗೊತ್ತಾಗಬೇಕಿದೆ ನಾವು ಎಷ್ಟು ವಾಸನೆ ಸಹಿಸಿಕೊಳ್ಳುತ್ತೇವೆ ಮತ್ತು ಸೊಳ್ಳೆ ಕಾಟದಿಂದ ಎಷ್ಟು ಬೇಸತ್ತಿದ್ದೇವೆ ಎಂಬುದು ಅಧಿಕಾರಿಗಳಿಗೆ ಗೊತ್ತಾಗಬೇಕಿದೆ. ಜ್ವರ, ನೆಗಡಿ, ಕೆಮ್ಮುನಿಂದ ಅನಾರೋಗ್ಯಕ್ಕೆ ಸಾಕಷ್ಟು ಜನ ತುತ್ತಾಗಿದ್ದಾರೆ. ಇದರಿಂದ ಚರಂಡಿಯ ಗಲೀಜನ್ನು ಸುರಿದು ಪ್ರತಿಭಟನೆ ಮಾಡಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದರು.
ಹಲವು ತಿಂಗಳಿಂದಲೂ ಗ್ರಾಮದ ಎಲ್ಲ ಚರಂಡಿಗಳಲ್ಲಿ ತುಂಬಿರುವ ಹೂಳು ತೆಗೆಯುವಂತೆ ಅನೇಕ ಬಾರಿ ಮನವಿ ಮಾಡಿಕೊಳ್ಳಲಾಗಿತ್ತು. ಗ್ರಾಮ ಸಭೆ, ವಾರ್ಡ್ ಸಭೆಗಳಲ್ಲೂ ಗಮನಕ್ಕೆ ತರಲಾಗಿತ್ತು. ಆದರೆ, ಯಾವುದಕ್ಕೂ ಕಿವಿಗೊಡದ ಪಿಡಿಒ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
ಇದನ್ನೂ ಓದಿ: ಫೆ.13ಕ್ಕೆ ದೆಹಲಿಯಲ್ಲಿ ದೇಶದ ರೈತ ಸಂಘಟನೆಗಳ ಮಹಾಸಂಗಮ ರ‍್ಯಾಲಿ: ಕುರುಬೂರು ಶಾಂತಕುಮಾರ್