ಹರಿಹರ: ನಗರದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ ಗುತ್ತೂರು ಸಮೀಪದ ಭೂತೆ ಕಲ್ಯಾಣ ಮಂಟಪದ ಮುಂಭಾಗದ ರಸ್ತೆಯಿಂದ ಬೈಪಾಸ್ ವರೆಗೆ ವರ್ತುಲ ರಸ್ತೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಎಸ್. ರಾಮಪ್ಪ ತಿಳಿಸಿದರು.
ಬೀರೂರು-ಸಮ್ಮಸಗಿ ರಸ್ತೆಯಲ್ಲಿ ಅಳವಡಿಸಲಾದ ಸುಮಾರು 1 ಕೋಟಿ ರೂ. ವೆಚ್ಚದ ಅಲಂಕಾರಿಕ ಬೀದಿ ದೀಪಗಳನ್ನು ಸಂಸದ ಜಿ.ಎಂ. ಸಿದ್ದೇಶ್ವರ್ ಅವರೊಂದಿಗೆ ಉದ್ಘಾಟಿಸಿ ಮಾತನಾಡಿದ ರಾಮಪ್ಪ, ಪ್ರಸ್ತಾವನೆ ಸಲ್ಲಿಸಿರುವ ವರ್ತುಲ ರಸ್ತೆಯು 40 ರಿಂದ 60 ಅಡಿಯಲ್ಲಿ ನಿರ್ಮಾಣಗೊಳ್ಳಲಿದ್ದು, ಇದಕ್ಕೆ ಈಗಾಗಲೇ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು ಶೀಘ್ರದಲ್ಲಿಯೇ ಮಂಜೂರಾತಿ ದೊರೆಯುವ ನಿರೀಕ್ಷೆ ಇದೆ ಎಂದರು.
ಈ ಸಮಯದಲ್ಲಿ ಧೂಡಾ ಕಾರ್ಯನಿರ್ವಾಹಕ ಅಭಿಯಂತರ ಕೆ.ಎಂ. ಶ್ರೀಕರ್ ಮಾಹಿತಿ ನೀಡಿ, ಬೀರೂರು- ಸಮ್ಮಸಗಿ ರಸ್ತೆಯ ಸುಮಾರು ಒಂದು ಕಿಲೋಮೀಟರ್ ಉದ್ದದ ವ್ಯಾಪ್ತಿಯಲ್ಲಿ 33 +18 ಒಟ್ಟು 51 ಕಂಬಗಳಿಗೆ ವಿಭಜಕಗಳ ಮಧ್ಯೆ ಅಲಂಕಾರಿಕ ದೀಪಗಳನ್ನು ಅಳವಡಿಸಲಾಗಿದೆ ಎಂಬ ಮಾಹಿತಿ ನೀಡಿದರು.
ಈ ವೇಳೆ ನಗರಸಭೆ ಸದಸ್ಯರುಗಳಾದ ಎಸ್.ಎಂ. ವಸಂತ್, ಪಿ.ಎನ್. ವಿರುಪಾಕ್ಷ, ಶಂಕರ್ ಖಟಾವ್ಕರ್, ಕೆ.ಜಿ. ಸಿದ್ದೇಶ್, ರಜನಿಕಾಂತ್, ವಿಜಯ್ ಕುಮಾರ್, ನೀತಾ ಮೆಹರವಾಡೆ, ಅಶ್ವಿನಿ ಕೃಷ್ಣ, ಬಿಜೆಪಿ ಜಿಲ್ಲಾ ಅಧ್ಯಕ್ಷ ಎಸ್. ವೀರೇಶ್ ಹನಗವಾಡಿ, ನಗರಸಭೆಯ ಪೌರಾಯುಕ್ತ ಎಸ್. ಲಕ್ಷ್ಮೀ ಉಪಸ್ಥಿತರಿದ್ದರು.