ದಾವಣಗೆರೆ: ಅಂತ್ಯಸಂಸ್ಕಾರ ನೆರವೇರಿಸಲು ಸೂಕ್ತ ಸ್ಥಳವಿಲ್ಲದ ಕಾರಣ ರಸ್ತೆ ಪಕ್ಕದಲ್ಲಿಯೇ ಮೃತದೇಹವನ್ನು ಹೂಳುತ್ತಿರುವ ಪ್ರಕರಣ ತಾಲೂಕಿನ ಕಾಡಜ್ಜಿ ಸಮೀಪದ ಪುಟಗನಾಳ್ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಪುಟಗನಾಳ್ ಗ್ರಾಮದಲ್ಲಿ ಸ್ವಂತ ಜಮೀನಿಲ್ಲದವರು, ಬಡವರು ರಸ್ತೆ ಪಕ್ಕದಲ್ಲಿಯೇ ಮೃತದೇಹಗಳನ್ನು ಮಣ್ಣು ಮಾಡುತ್ತಿದ್ದಾರೆ. ಈ ಹಿಂದೆ ಇಲ್ಲಿನ ಖಾಸಗಿ ಜಾಗದಲ್ಲಿ ಶವಸಂಸ್ಕಾರ ನೆರವೇರಿಸಲಾಗುತ್ತಿತ್ತು. ಇತ್ತೀಚೆಗಷ್ಟೇ ಈ ಭೂಮಿಯ ಮಾಲೀಕರು ಜಾಗವನ್ನು ಮರುಸ್ವಾಧೀನ ಪಡಿಸಿಕೊಂಡಿದ್ದಾರೆ. ಹಾಗಾಗಿ ಸಾವಿಗೀಡಾದವರ ಅಂತ್ಯಸಂಸ್ಕಾರ ನಡೆಸಲು ಜಾಗ ಇಲ್ಲದಂತಾಗಿದೆ.
ಕಳೆದ ನಾಲ್ಕು ದಿನಗಳ ಹಿಂದೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ರಸ್ತೆ ಪಕ್ಕದಲ್ಲಿಯೇ ಶವ ಸುಡಲಾಗಿದೆ. ಬಳಿಕ ಅವಶೇಷಗಳನ್ನು ರಸ್ತೆ ಪಕ್ಕದಲ್ಲಿ ಗುಂಡಿ ತೆಗೆದು ಮುಚ್ಚಿರುವ ಕುರುಹು ಕಾಣಸಿಗುತ್ತದೆ. ಇದೇ ರೀತಿಯಲ್ಲಿ ರಸ್ತೆಯ ಇಕ್ಕೆಲೆಗಳಲ್ಲಿ ಶವ ಹೂತಿರುವ ಉದಾಹರಣೆಗಳು ಇಲ್ಲಿ ಕಾಣ ಸಿಗುತ್ತವೆ.
ಅವೈಜ್ಞಾನಿಕವಾಗಿ ಶವಗಳನ್ನು ಎಲ್ಲೆಂದರಲ್ಲಿ ಹೂಳುವುದು, ಸುಡುವುದರಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ರಸ್ತೆಯ ಪಕ್ಕದಲ್ಲೇ ಶವಗಳನ್ನು ಹೂಳುವುದರಿಂದ ರಸ್ತೆಯಲ್ಲಿ ಓಡಾಡಲು ಜನರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತ್ಯೇಕ ಸ್ಮಶಾನ ಜಾಗಕ್ಕೆ ಮನವಿ:
ಆದಷ್ಟು ಬೇಗ ಪುಟಗನಾಳ್ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಸೂಕ್ತ ಸ್ಥಳ ನಿಗದಿಪಡಿಸಬೇಕೆಂದು ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.