ದಾವಣಗೆರೆ : ಆ ಸೇತುವೆಯನ್ನು ಮೂರು ಬಾರಿ ನೆಲಸಮ ಮಾಡಿ ಮರು ನಿರ್ಮಾಣ ಮಾಡಿದ್ದರೂ ಸೇತುವೆ ಕುಸಿದು ಬಿದ್ದಿದೆ. ಮಳೆಯ ಹೊಡೆತಕ್ಕೆ ಮತ್ತೆ ಸೇತುವೆ ಕುಸಿದಿದ್ದು, ಇದರಿಂದ ಸುತ್ತ ಹತ್ತೂರಿನ ಸಂಪರ್ಕ ಕಡಿತವಾಗಿದ್ದರಿಂದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸೇತುವೆ ರೈತರಿಗೆ, ಶಾಲೆಯ ಮಕ್ಕಳಿಗೆ, ಜನಸಾಮಾನ್ಯರಿಗೆ ಸಂಪರ್ಕದ ಸೇತುವೆಯಾಗಿತ್ತು. ಆದರೆ ಮುಂಗಾರು ಪೂರ್ವ ಮಳೆಯ ಹೊಡೆತಕ್ಕೆ ಸೇತುವೆ ಕೊಚ್ಚಿ ಹೋಗಿದ್ದು, ಕಳಪೆ ಕಾಮಗಾರಿ ಬಗ್ಗೆ ಬೆಳ್ಳೂಡಿ ಹಾಗು ರಾಮತೀರ್ಥ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಹಾಗು ರಾಮತೀರ್ಥ ಗ್ರಾಮಗಳು ಸೇರಿದಂತೆ ಹತ್ತೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆ ಇದಾಗಿದೆ. ಸತತ ಮೂರ್ನಾಲ್ಕು ದಿನಗಳಿಂದ ಸುರಿದ ಮುಂಗಾರು ಪೂರ್ವ ಮಳೆಗೆ ಸೇತುವೆ ಭಾಗಶಃ ಕೊಚ್ಚಿಹೋಗಿದೆ. ಕಳೆದೆರಡು ವರ್ಷಗಳಲ್ಲಿ ಮೂರು ಬಾರಿ ಈ ಸೇತುವೆ ಕುಸಿದಿದ್ದು, ಇದರಿಂದಾಗಿ ರಾಮತೀರ್ಥ, ಕಮಲಪುರ, ಮೇಗೆನಹಳ್ಳಿ, ಉಕ್ಕಡಗಾತ್ರಿ, ನಂದಿಗಾವಿ, ಬಾನುವಳ್ಳಿ, ಸಿರಿಗೆರೆ, ಹೊಸಹಳ್ಳಿ, ಹೊಸಹಳ್ಳಿ ವೇಮನಮಠ ಹೀಗೆ ಹಲವು ಹಳ್ಳಿಗಳಿಗೆ ಸಂಪರ್ಕ ಕಡಿತವಾಗಿದೆ. ಸತತ ಮೂರು ಬಾರಿ ಈ ಸೇತುವೆ ಬಿದ್ದಿದ್ದರಿಂದ ರೈತರಿಗೆ ತಮ್ಮ ತೋಟಗಳಿಗೆ ತೆರಳಲು, ಮಕ್ಕಳು ಶಾಲೆಗೆ ತೆರಳಲು ಹಾಗು ಜನರಿಗೆ ಸಂಚಾರ ನಡೆಸಲು ಸಾಕಷ್ಟು ತೊಂದರೆಯಾಗಿದೆ. ಇದಲ್ಲದೆ ಈ ಸೇತುವೆ ಕುಸಿದಿದ್ದರಿಂದ 15 ಕಿ.ಮೀ ಕ್ರಮಿಸಿ ಹಳ್ಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಸೇತುವೆ ಕುಸಿದ ಪರಿಣಾಮ ನೀರು ಪಕ್ಕದ ತೋಟಕ್ಕೆ ನುಗ್ಗಿದ ಪರಿಣಾಮ ತೋಟದಲ್ಲಿ ಬೆಳೆದಿದ್ದ ಅಡಿಕೆ, ತೆಂಗು ಮರಗಳು ಕೊಚ್ಚಿ ಹೋಗಿದ್ದರಿಂದ ರೈತರಿಗೆ ನಷ್ಟ ಉಂಟಾಗಿದೆ.
2.90 ಕೋಟಿ ವೆಚ್ಚದಲ್ಲಿ ಸೇತುವೆ ಮರು ನಿರ್ಮಾಣ: ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರ ಕಾಲಾವಧಿಯಲ್ಲೇ ಈ ಸೇತುವೆಯನ್ನು ಮೂರು ಬಾರಿ ನಿರ್ಮಾಣ ಮಾಡಿದ್ದು, ಮತ್ತೆ ಕುಸಿತ ಕಂಡಿದೆ. ಸೇತುವೆ ಕುಸಿದಿದ್ದರಿಂದ ಒಂದು ಬಾರಿ ಆರು ಲಕ್ಷ, ಒಮ್ಮೆ ಮೂರು, ಮತ್ತೊಮ್ಮೆ ನಾಲ್ಕು ಲಕ್ಷ ಹಣ ವ್ಯಯ ಮಾಡಿ ಜಿಲ್ಲಾಡಳಿತ ಸೇತುವೆ ನಿರ್ಮಾಣ ಮಾಡಿತ್ತು. ಆದರೆ ಇದೀಗ ಮತ್ತೆ ಸೇತುವೆ ಕುಸಿದಿದ್ದು, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ಸೇತುವೆ ಕುಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೇತುವೆಗೆ ಕಾಯಕಲ್ಪ ನೀಡಲು, ಎರಡು ಕೋಟಿ ತೊಂಬತ್ತು ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬೀಳಗಿ ಮಾಹಿತಿ ನೀಡಿದರು.
ಓದಿ : ಕೋಲಾರದಲ್ಲಿ ಕೆರೆಗಳ ಅಭಿವೃದ್ಧಿ : ಸಂಸದರ ಅನುದಾನದಿಂದ ಹಣ ಬಿಡುಗಡೆ ಮಾಡಿದ ನಿರ್ಮಲಾ ಸೀತಾರಾಮನ್