ದಾವಣಗೆರೆ: ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೆರಿಕಾದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ ಸಿದ್ದಪಡಿಸಿದ ಪಟ್ಟಿಯಲ್ಲಿ ದಾವಣಗೆರೆಯ ಶಿವಗಂಗೋತ್ರಿ ವಿಶ್ವವಿದ್ಯಾಲಯದ ಗಣಿತ ಶಾಸ್ತ್ರವಿಭಾಗದ ಪ್ರೊ. ಬಿ. ಸಿ ಪ್ರಸನ್ನಕುಮಾರ್ ಸೇರಿದಂತೆ ಆರು ಅಧ್ಯಾಪಕರುಗಳು ಸ್ಥಾನ ಪಡೆದಿದ್ದಾರೆ.
ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯ ಸಿದ್ದಪಡಿಸಿದ ಜಾಗತಿಕ ಮಟ್ಟದ ಶೇಷ್ಠ ಶೇ. 2 ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕರುಗಳಾದ ಪ್ರೊ. ಬಿ. ಸಿ ಪ್ರಸನ್ನ ಕುಮಾರ್ (ಶಾಖ ಮತ್ತು ಸಮೂಹ ವರ್ಗಾವಣೆ, ಸಂಖ್ಯಾತ್ಮಕ ವಿಶ್ಲೇಷಣೆ, ಘನ ಚಲನ ಶಾಸ್ತ್ರ, ದ್ರವ ಚಲನ ಶಾಸ್ತ್ರ)
ಪ್ರೊ. ಡಿ. ಜಿ ಪ್ರಕಾಶ (ಭೇದಾತ್ಮಕ ರೇಖಾಗಣಿತ, ಭಿನ್ನರಾಶಿ ಕಲನಶಾಸ್ತ್ರ, ಅನ್ವಯಿಕ ಗಣಿತಶಾಸ್ತ್ರ, ವಿಭಿನ್ನ ಸಮೀಕರಣಗಳಿಗೆ ಪರಿಹಾರ), ಪ್ರೊ. ಯು. ಎಸ್. ಮಹಾಬಲೇಶ್ವರ್ (ಶಾಖ ಮತ್ತು ಸಮೂಹ ವರ್ಗಾವಣೆ, ದ್ರವ ಚಲನ ಶಾಸ್ತ್ರ), ಡಾ. ಕೆ ಗಣೇಶ್ ಕುಮಾರ್(ಶಾಖ ಮತ್ತು ಸಮೂಹ ವರ್ಗಾವಣೆ, ದ್ರವ ಚಲನ ಶಾಸ್ತ್ರ) ಅವರುಗಳು ಸ್ಥಾನ ಪಡೆದಿದ್ದರೆ, ಸಂಶೋಧನಾರ್ಥಿಗಳಾದ ಆರ್. ಜೆ ಪುನೀತ್ ಗೌಡ ( ದ್ರವ ಚಲನ ಶಾಸ್ತ್ರ) ಮತ್ತು ಆರ್. ನವೀನ್ ಕುಮಾರ್ (ಶಾಖ ಮತ್ತು ಸಮೂಹ ವರ್ಗಾವಣೆ, ದ್ರವ ಚಲನ ಶಾಸ್ತ್ರ) ಅವರುಗಳು ಕೂಡ ವಿಶ್ವ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನಗಳಿಸಿ ವಿವಿಗೆ ಹೆಗ್ಗಳಿಕೆ ತಂದಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟದ ಸಂಶೋಧನೆ, ಸಂಶೋಧನಾ ವರದಿ, ಸಂಶೋಧನಾ ಉಲ್ಲೇಖಗಳು, ಲೇಖನಗಳನ್ನು ಒಳಗೊಂಡ ಹೆಚ್-ಇಂಡೆಕ್ಸ್, ಐ-ಟೆನ್ ಇಂಡೆಕ್ಸ್ ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಪಟ್ಟಿಯನ್ನು ಸಿದ್ದಪಡಿಸಲಾಗಿದೆ. ವಿಶೇಷತೆ ಎಂದರೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಎಲ್ಲ ವಿಜ್ಞಾನಿಗಳು ಗ್ರಾಮೀಣ ಪ್ರತಿಭೆಗಳಾಗಿದ್ದಾರೆ.
ಅಲ್ಲದೇ, ಪ್ರೊ. ಬಿ. ಸಿ ಪ್ರಸನ್ನ ಕುಮಾರ್ ಮತ್ತು ಪ್ರೊ. ಡಿ. ಜಿ ಪ್ರಕಾಶ ಅವರು 2020ನೇ ಸಾಲಿನಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿಯೂ ಕೂಡ ಸ್ಥಾನ ಪಡೆದಿದ್ದು ಗಮನಾರ್ಹ ಸಾಧನೆಯಾಗಿದೆ. ಪಟ್ಟಿಯಲ್ಲಿ ಸ್ಥಾನ ಪಡೆದ ವಿಜ್ಞಾನಿಗಳಿಗೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಬಿ. ಡಿ ಕುಂಬಾರ ಮತ್ತು ಆಡಳಿತ ವರ್ಗ ಅಭಿನಂದಿಸಿದೆ.
ಓದಿ: ದಾವಣಗೆರೆಯಲ್ಲಿ ಧಾರಾಕಾರ ಮಳೆ: ನೆಲಕ್ಕುರುಳಿದ 27 ಮನೆ.. ಜನರ ಜೀವನ ಅಯೋಮಯ