ದಾವಣಗೆರೆ: ಕೊರೊನಾ ಸೋಂಕು ತಡೆಗೆ ಭಾನುವಾರ ಸಂಪೂರ್ಣ ಲಾಕ್ಡೌನ್ ವಿಧಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಹೊರಡಿಸಿರುವ ಆದೇಶಕ್ಕೆ ಬೆಣ್ಣೆನಗರಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ಬಹುತೇಕ ರಸ್ತೆಗಳು ಖಾಲಿ ಖಾಲಿಯಾಗಿದ್ದು,ಕೆಲವು ಮಂದಿ ಮಾತ್ರ ಸಂಚಾರ ನಡೆಸುತ್ತಿದ್ದಾರೆ. ಮೆಡಿಕಲ್ ಶಾಪ್ಗಳು, ದಿನಸಿ ಅಂಗಡಿಗಳು ಸೇರಿದಂತೆ ತುರ್ತು ಸೇವೆಗೆ ಮಾತ್ರ ಅನುಮತಿ ನೀಡಲಾಗಿದೆ. ಉಳಿದಂತೆ ಜನರು ಮನೆಯಿಂದ ಹೊರಬರುವುದು ಕಡಿಮೆಯಾಗಿದೆ. ಬಸ್ ಸಂಚಾರ ಇಲ್ಲದಿರುವುದರಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ.
ಭಾನುವಾರ ಮೊದಲೇ ನಿಗದಿಪಡಿಸಿದ್ದ ಮದುವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಮದ್ಯ ಮಾರಾಟ ನಿಷೇಧಿಸಲಾಗಿದೆ. ಅವಶ್ಯಕ ವಸ್ತುಗಳಿಗೆ ನಿರ್ಬಂಧ ಹೇರಲಾಗಿಲ್ಲ. ಸೋಮವಾರ ಬೆಳಿಗ್ಗೆ 7 ರಿಂದ ಎಂದಿನಂತೆ ಕೆ.ಎಸ್ ಆರ್.ಟಿ.ಸಿ ಬಸ್ ಸಂಚಾರ ಇರಲಿದೆ ಎಂದು ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಎನ್. ಹೆಬ್ಬಾಳ್ ತಿಳಿಸಿದ್ದಾರೆ.